ಪ್ರತಿಯೊಬ್ಬ ನಾಗರಿಕರಲ್ಲಿ ಸಮಾಜಿಕ ಬದ್ಧತೆ, ಕಾಳಜಿ ಮೂಡಿದಾಗ ಮಾತ್ರ, ಪರಿವರ್ತನೆಯನ್ನು ತರಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಕಸವನ್ನು ಸ್ವಚ್ಚಗೊಳಿಸಲು ಮುಂದಾಗಿದ್ದ ನಗರದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕರ ತಂಡದೊಂದಿಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ಪ್ರತಿಯೊಬ್ಬ ನಾಗರಿಕರಲ್ಲಿ ಅರಿವು ಮೂಡಿಸಬೇಕಾದಂತಹ ಅನಿವಾರ್ಯತೆ ಇದೆ, ಎಲ್ಲರೂ ಜಾಗೃತರಾದರೆ, ಸಮಾಜದಲ್ಲಿ ಮಾರಕವಾದ ರೋಗಗಳು ಹರಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈಗಾಗಲೇ ಕ್ರೀಡಾಂಗಣದ ಸುತ್ತಮುತ್ತಲಿನ ಮನೆಗಳಲ್ಲಿನ ಜನರು ಕಸವನ್ನು ತಂದು ಕ್ರೀಡಾಂಗಣದೊಳಗೆ ಸುರಿಯುತ್ತಿರುವುದರಿಂದ ಇಲ್ಲಿಗೆ ಬರುವಂತಹ ಕ್ರೀಡಾಪಟುಗಳು, ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಕ್ರೀಡಾಂಗಣದಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ನಗರಸಭೆಯವರಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಸಮಾನ ಮನಸ್ಕರ ತಂಡ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡಿರುವುದು ಅನೇಕ ಮಂದಿಗೆ ಸ್ಪೂರ್ತಿಯಾಗಲಿದೆ, ಕ್ರೀಡಾಂಗಣದಲ್ಲಿ ಯಾವುದೇ ಅಹಿತಕರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಪೊಲೀಸರನ್ನು ನೇಮಕ ಮಾಡಿ, ಗಸ್ತು ತಿರುಗುವಂತೆ ಸೂಚನೆ ನೀಡಲಾಗುತ್ತದೆ ಎಂದರು.
ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು, ಹಾಗೂ ಕ್ರೀಡಾಪಟುಗಳು, ಮಕ್ಕಳು ಮತ್ತಿತರರು ಈ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
- Advertisement -
- Advertisement -
- Advertisement -
- Advertisement -