ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅನವಶ್ಯಕ ಭಯ, ಆತಂಕದ ಬಗ್ಗೆ ಚಿಂತಿಸದೆ ತಮ್ಮ ಶ್ರಮವನ್ನು ನಂಬಬೇಕು ಎಂದು ಪ್ರವಚನಕಾರ ಟಿ.ಎಲ್.ಆನಂದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪರೀಕ್ಷೆಯ ಪೂರ್ವಸಿದ್ದತೆ ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಏಕಾಗ್ರತೆ ಇಲ್ಲದ ಓದು ಜೀರ್ಣವಾಗದ ಆಹಾರದಂತೆ. ಏಕಾಗ್ರತೆಯಿಂದ ಓದುವ, ಓದು ಆನಂದವನ್ನು ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ. ವಿದ್ಯಾರ್ಥಿಗಳು ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಏಕಾಗ್ರತೆ ತಾನೇ ತಾನಾಗಿ ಬರುತ್ತದೆ. ಪರೀಕ್ಷಾ ತಯಾರಿ ವ್ಯವಸ್ಥಿತವಾಗಿದ್ದಾಗ ಯಾವುದೇ ಭಯ ಆತಂಕಗಳಿಗೆ ಆಸ್ಪದವಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ಪೋಷಕಪಾತ್ರವೂ ಮಹತ್ವದ್ದು. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಚೆನ್ನಾಗಿ ಶ್ರಮಪಟ್ಟು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಿಲ್ಲವೆನಿಸಿದರೆ, ಪ್ರಗತಿ ಸಾಧಿಸುತ್ತಿಲ್ಲವಾದರೆ, ನಿಮ್ಮ ಅಭ್ಯಾಸಕ್ರಮವನ್ನು ಬದಲಿಸಿ, ಆತ್ಮಾವಲೋಕನ ಮಾಡಿಕೊಳ್ಳುತ್ತಾ ಶಿಕ್ಷಕರ ಸಲಹೆ ಪಡೆಯಿರಿ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಟಿ.ಸಿದ್ದೇಶ್, ಶಾಲೆಯ ಶಿಕ್ಷಕರಾದ ಎಸ್.ಎ.ವಿಶ್ವನಾಥ್, ಎಸ್.ನಾಗೇಶ್, ಸಿ.ಕೆ.ಹರೀಶ್ ಬಾಬು, ಸಿ.ಅಮರನಾಥ್, ಎಸ್.ಶಿವಲೀಲಾ, ಭರಮಪ್ಪ ಹಿರೇಕೆರೂರ್ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.