Home News ನಿಧನ ವಾರ್ತೆ

ನಿಧನ ವಾರ್ತೆ

0

ನಗರದ ದೇಶದಪೇಟೆ ನಿವಾಸಿ ನಿವೃತ್ತ ಶಿಕ್ಷಕ ಬಿ.ಎನ್.ಚಂದ್ರಪ್ಪ(78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ವೀರಶೈವ ರುದ್ರಭೂಮಿಯಲ್ಲಿ ನಡೆಸಲಾಯಿತು.
ಬಿ.ಎನ್.ಸಿ ಮೇಸ್ಟ್ರು ಎಂದೇ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಇವರು ಚಿರಪರಿಚಿರು. ಇವರು ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಮೇಲೂರು, ಪಿಯುಸಿ ಬೋರ್ಡ್, ಜ್ಯೂನಿಯರ್ ಕಾಲೇಜು, ಗಂಜಿಗುಂಟೆ ಮತ್ತು ಚೀಮಂಗಲದಲ್ಲಿ ಹೈಸ್ಕೂಲ್ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇವರ ಶಿಷ್ಯರಲ್ಲಿ ಮೂವರು ಐಎಎಸ್, ೫ ಕೆಎಎಸ್ ಮತ್ತು ಒಬ್ಬರು ಐಪಿಎಸ್ ಆಗಿರುವರು.
೧೯೬೮ರಲ್ಲಿ ಕರ್ನಾಟಕ ಯುವಜನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಗಣೇಶೋತ್ಸವ ಹಾಗೂ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾಜ್ಯ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ನಗರದಲ್ಲಿ ರಂಗಭೂಮಿ ಕಲೆ ಬೆಳೆಯಲು ಶ್ರಮಿಸಿರುವರು. ತಾಲ್ಲೂಕಿನಾದ್ಯಂತ ಥಿಯೋಸೋಫಿಕಲ್ ಸೊಸೈಟಿಯ ಮೂಲಕ ಮಾನಸಿಕ ಸದೃಢತೆಗಾಗಿ ಹಲವಾರು ಶಿಬಿರಗಳನ್ನು ಆಯೋಜಿಸಿದ್ದಾರೆ. ಬಿ.ಎನ್.ಸಿ ಮೇಸ್ಟ್ರ ಜೀವಮಾನ ಸಾಧನೆಯನ್ನು ಗುರುತಿಸಿ 2011ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ದ್ವಿತೀಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
ಶಾಸಕ ಎಂ.ರಾಜಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ಮತ್ತಿತರರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.