ದುಷ್ಟ ವ್ಯಕ್ತಿಗಳನ್ನು ಸಮಾಜ ಸಹಿಸಿಕೊಳ್ಳುತ್ತದೆ. ಆದರೆ ಪ್ರಾಮಾಣಿಕರನ್ನು ಸಹಿಸುವುದಿಲ್ಲ. ಸೋಲು, ನಿಂದನೆ, ಅಪಮಾನಗಳು ಬಂದರೂ ತತ್ವಗಳನ್ನು ಬಿಡದೇ ತಾಳ್ಮೆಯಿಂದ ಇರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮೂಲಭೂತ ಕರ್ತವ್ಯ’ಗಳ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ’ ಎಂಬ ಶೀರ್ಷಿಕೆಯ ನೈತಿಕ ಮೌಲ್ಯಗಳ ಒಂದು ಪುಟ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿಗಳು ಬರೆದ ಪ್ರಬಂಧಗಳನ್ನು ಅವಲೋಕಿಸಿದಾಗ ಅವರ ಬೌದ್ಧಿಕ ಪ್ರೌಢಿಮೆ ಕಂಡು ಅಚ್ಚರಿಯಾಗುತ್ತದೆ. ವೃದ್ಧ ತಂದೆ ತಾಯಿಯರನ್ನು ರಕ್ಷಿಸುವುದು, ನೀರು, ವಿದ್ಯುತ್ ಸದ್ಭಳಕೆ ಮುಂತಾದ ಅಂಶಗಳು ಮೂಲ ಕರ್ತವ್ಯಗಳಾಗಬೇಕು ಎಂದು ಮಕ್ಕಳು ಆಲೋಚಿಸಿರುವುದು ಮೆಚ್ಚುವ ಸಂಗತಿ ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾದ ವಕೀಲೆ ನೌತಾಜ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಕೀಲ ಎಂ.ಬಿ.ಲೋಕೇಶ್ ಸಕಾಲದ ಬಗ್ಗೆ ವಿವರಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರಾದ ಎಸ್.ಎಂ.ನಿವೇದಿತ, ಸಾದಲಿ ಪ್ರೌಢಶಾಲೆ, ಬಿ.ಎನ್.ಪವಿತ್ರ, ಬಿ.ಎಂ.ವಿ.ಭಕ್ತರಹಳ್ಳಿ ಪ್ರೌಢಶಾಲೆ, ಮೇಘನಾ, ವಾಸವಿ ಪ್ರೌಢಶಾಲೆ, ಚೈತ್ರ, ಸಾದಲಿ ಪ್ರೌಢಶಾಲೆ ಮತ್ತು ತೇಜಸ್, ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಅವರಿಗೆ ಪ್ರಶಸ್ತಿಪತ್ರವನ್ನು ನೀಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -