ನಾಲ್ಕು ಕೋಟಿ ಐವತ್ತಮೂರು ಲಕ್ಷ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹಗಳನ್ನು ಅತಿ ಶೀಘ್ರದಲ್ಲಿ ನಿರ್ಮಿಸಿ ಸಮರ್ಪಿಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸಮೀಪ ಸೋಮವಾರ ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜನತೆಯಿಂದ ಅಗ್ನಿಶಾಮಕ ಠಾಣೆಯು ಬಹುದಿನದ ಬೇಡಿಕೆಯಾಗಿತ್ತು. ತಾಲ್ಲೂಕಿನಲ್ಲಿ ಅಗ್ನಿ ದುರಂತಗಳು ಸಂಭವಿಸಿದರೆ ಅದನ್ನು ನಿವಾರಿಸಲು ಬೇರೆ ಕಡೆಯಿಂದ ಅಗ್ನಿ ಶಾಮಕ ವಾಹನ ಬರುವುದು ತಡವಾಗುತ್ತಿತ್ತು. ತಾಲ್ಲೂಕಿನ ಹಲವೆಡೆ ಇದರಿಂದ ಅಪಾರವಾದ ಹಾನಿಯಾಗಿತ್ತು. ಇದನ್ನು ತಡೆಯಲೆಂದು ನಗರದ ಪೋಲಿಸ್ ಠಾಣೆ ಪಕ್ಕದಲ್ಲಿ ತಾತ್ಕಾಲಿಕವಾಗಿ ಅಗ್ನಿ ಶಾಮಕ ಠಾಣೆ ಕಾರ್ಯನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಪ್ರಾರಂಭಿಸಲು ಪ್ರಯತ್ನವನ್ನು ನಡೆಸಿದ್ದು, ಅತ್ಯಂತ ತ್ವರಿತವಾಗಿ ಕಾಲೇಜಿಗಾಗಿ ಅನುಮತಿ ಪಡೆಯುತ್ತೇವೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಬಸ್ ಡಿಪೋ ನಿರ್ಮಿಸಿಸುವ ಯೋಜನೆಯು ಇದ್ದು ತಾಲ್ಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳುವುದಾಗಿ ತಿಳಿಸಿದರು.
ಸಾರ್ವಜನಿಕರ ಪರವಾಗಿ ಬೆಳ್ಳೂಟಿ ನಾಗಪ್ಪ, ಶಿಡ್ಲಘಟ್ಟ ಮತ್ತು ಜಂಗಮಕೋಟೆ ನಡುವೆ ಶಾಲಾ ಅವಧಿಯಲ್ಲಿ ಸಾರಿಗೆ ಬಸ್ ಸಂಚರಿಸಲು ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜ ರಘು, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಬೈರೇಗೌಡ, ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಿ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಶಿವಕುಮಾರ್, ಮಂಜುನಾಥ್, ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
.
- Advertisement -
- Advertisement -
- Advertisement -