28 C
Sidlaghatta
Tuesday, February 4, 2025

ನಾಡಿನಾದ್ಯಂತ ಹೆಸರು ಮಾಡಿದ್ದ ದೇವರಮಳ್ಳೂರು ಕಳಸ ನೃತ್ಯದ ಮೆಲುಕುಗಳು

- Advertisement -
- Advertisement -

‘ಪಂಡರಿ ಭಜನೆಗಳು, ಕೋಲಾಟದ ಪದಗಳು, ಕೋಲಾಟದ ವಿಧಗಳು ಅದರಲ್ಲಿ ಬಳಸುವ ಹಾಡುಗಳು, ಎಲ್ಲವನ್ನೂ ಬರೆದಿಟ್ಟಿದ್ದೇನೆ. ಈಗಲೂ ಕಲಿಯಲು ಆಸಕ್ತರಿಗೆ ಕಲಿಸಲು ಸಿದ್ಧನಿದ್ದೇನೆ. ನನ್ನ ನಂತರವೂ ಕಲೆಯು ಉಳಿಯಬೇಕೆಂಬುದು ನನ್ನ ಅಭಿಲಾಷೆ’ ಎನ್ನುತ್ತಾರೆ 74 ವರ್ಷ ವಯಸ್ಸಿನ ದೇವರಮಳ್ಳೂರು ಎ.ವೆಂಕೋಬರಾವ್.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಪಂಡರಿ ಭಜನೆ ತಂಡ ಎಂಭತ್ತರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿತ್ತು. ಆ ಕಲಾ ತಂಡದೊಂದಿಗೆ ನಾಡಿನ ಮೂಲೆ ಮೂಲೆ ಸುತ್ತಿದವರು ದೇವರಮಳ್ಳೂರು ಎ.ವೆಂಕೋಬರಾವ್.
ವೃತ್ತಿಯಲ್ಲಿ ಸರ್ಕಾರಿ ಶಿಕ್ಷರಾಗಿ 40 ವರ್ಷ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ವೆಂಕೋಬರಾವ್ ಅವರದ್ದು ಕಲಾವಿದ ಮನಸ್ಸು. ಗ್ರಾಮದಲ್ಲಿ ಪಂಡರಿ ಭಜನೆಯನ್ನು ಆಸಕ್ತ ಕಲಾವಿದರು ಹಾಗೂ ಕಲಾ ಪೋಷಕರೊಂದಿಗೆ ಸೇರಿ ಪ್ರಾರಂಭಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದ ಕಳಸ ನೃತ್ಯ 1991ರ ದಸರಾ ಟ್ಯಾಬ್ಲೋದೊಡನೆ.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದ ಕಳಸ ನೃತ್ಯ 1991ರ ದಸರಾ ಟ್ಯಾಬ್ಲೋದೊಡನೆ.

ದೇವರಮಳ್ಳೂರು ಗ್ರಾಮದಲ್ಲಿ 1980 ರಲ್ಲಿ ಈ ಗ್ರಾಮೀಣ ಕಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಎಂ.ಬಚ್ಚಪ್ಪನವರು ಅಧ್ಯಕ್ಷರಾಗಿ, ಎ.ವೆಂಕೋಬರಾವ್ ಕಾರ್ಯದರ್ಶಿಯಾಗಿ, ಶೆಟ್ಟಳ್ಳಪ್ಪ ಭಜನೆ ಕಲಿಸುವ ಗುರುಗಳಾಗಿ, ಹಾರ್ಮೋನಿಯಂ ನುಡಿಸುವ ಹನುಮಂತರಾಯಪ್ಪ, ತಬಲಾ ನಾರಾಯಣಾಚಾರಿ, ತಾಳದ ವೆಂಕಟೇಶಪ್ಪ, ಸಹಾಯಕರನ್ನಾಗಿ ವೆಂಕಟೇಶಪ್ಪ ಮತ್ತು ಪಾಪಣ್ಣ ಅವರನ್ನು ಆಯ್ಕೆ ಮಾಡಿಕೊಂಡರು.
ಹಿಂದಿನ ಕಾಲದಲ್ಲಿ ಪಾಂಡುರಂಗನ ಭಕ್ತರು ಪಾಂಡುರಂಗನ ದರ್ಶನಾರ್ಥವಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗುವ ಸ್ಥಳಗಳಲ್ಲಿ ನೃತ್ಯ ರೂಪದಲ್ಲಿ ಪಾಂಡುರಂಗನನ್ನು ಪ್ರಾರ್ಥಿಸುತ್ತಾ ತಮ್ಮ ಆಯಾಸ ಪರಿಹರಿಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ಹುಟ್ಟಿದ್ದೇ ಪಂಡರಿ ಭಜನೆ.
ಕಾವಿಬಣ್ಣದ ಅಂಗಿ ಬಿಳಿ ದೋತ್ರವನ್ನುಟ್ಟು ತಲೆಗೆ ಟೋಪಿಯನ್ನಿಟ್ಟುಕೊಂಡು ಕೈಯಲ್ಲಿ ಬಾವುಟವನ್ನಿಡಿದು ವೃತ್ತಾಕಾರದಲ್ಲಿ ನೃತ್ಯ ಮಾಡುತ್ತಾ ಪಾಂಡುರಂಗನ ಭಜನೆ ಮಾಡುವುದು ಪಂಡರಿ ಭಜನೆಯ ಮೂಲವಾಗಿತ್ತು. ಆದರೆ ತಾಲ್ಲೂಕಿನ ದೇವರಮಳ್ಳೂರಿನ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದವರು ಈ ಕಲೆಗೆ ವಿನೂತರ ರೂಪವನ್ನು ಒದಗಿಸಿದ್ದರು. ಸಾಮಾನ್ಯವಾಗಿ ಪಂಡರೀಭಜನೆಯು ತೆಲುಗು ಭಾಷೆಯಲ್ಲಿರುತ್ತದೆ. ಅದನ್ನು ಎ.ವೆಂಕೋಬರಾವ್ ಕನ್ನಡ ಭಾಷೆಗೆ ಸೊಗಸಾಗಿ ಅನುವಾದಿಸಿದ್ದರು.
ಪ್ರಥಮವಾಗಿ ಗಣಪತಿ ಪ್ರಾರ್ಥನೆಯೊಂದಿಗೆ ಭಜನೆ ನೃತ್ಯ ಆರಂಭಿಸುತ್ತಿದ್ದ ತಂಡವು ಗುರು ನಮಸ್ಕಾರ, ಶಾರದಾದೇವಿಗೆ ನಮನ, ನಂತರ ಜಂಡಾ ಕುಣಿತ, ಕೋಲಾಟ, ಸಾಲು ಕಳಸ, ಕಡೆಗೆ ಚಕ್ಕೆ ಕಳಸದೊಂದಿಗೆ ಕೃಷ್ಣಲೀಲೆ ಅಭಿನಯಿಸುತ್ತಿದ್ದರು. ಈ ನೃತ್ಯದ ವೇಳೆಯಲ್ಲಿ ಬಾಲೆಯರು ಹೊರುವ ಕಳಸಗಳು 2 ರಿಂದ 2.5 ಕೆ.ಜಿ ವರೆಗೂ ಇರುತ್ತಿತ್ತು. ಯಾವುದೇ ಆಧಾರವಿಲ್ಲದೆ ತಲೆಯ ಮೇಲೆ ಕಳಸಗಳನ್ನು ಹೊತ್ತು, ಕೈಯಿಂದ ಕೂಡ ಮುಟ್ಟದೇ ಗಂಟೆಗಟ್ಟಲೇ ನೃತ್ಯ ಮಾಡುವ ಹೆಣ್ಣುಮಕ್ಕಳು ವಿವಿಧ ಭಾವ ಭಂಗಿಗಳನ್ನು ನಿರಾತಂಕವಾಗಿ ಪ್ರದರ್ಶಿಸುತ್ತಿದ್ದರು.
ಶಿಡ್ಲಘಟ್ಟದಲ್ಲಿ ಯುವಜನ ಮೇಳದಲ್ಲಿ ಪ್ರಥಮ ಬಾರಿ ಪ್ರದರ್ಶನ ನೀಡಿದ ತಂಡ, ಸ್ವಂತ ಗ್ರಾಮದಲ್ಲಿ ಮಳ್ಳೂರಾಂಭಾ ಉತ್ಸವ, ದಸರಾ ವಸ್ತು ಪ್ರದರ್ಶನಗಳಲ್ಲಿ ಹಲವಾರು ಬಾರಿ ಪ್ರದರ್ಶನ ನೀಡಿ ಮೆಚ್ಚುಗೆಗಳಿಸಿತ್ತು.
ಕಳಸ ಹೊತ್ತ ಬಾಲೆಯರು ಕೃಷ್ಣನನ್ನು ಎತ್ತಿ ನರ್ತಿಸುತ್ತಿರುವುದು.
ಕಳಸ ಹೊತ್ತ ಬಾಲೆಯರು ಕೃಷ್ಣನನ್ನು ಎತ್ತಿ ನರ್ತಿಸುತ್ತಿರುವುದು.

ಈ ಪಂಡರಿ ಭಜನೆ ತಂಡ ಎಲ್ಲಿಗೇ ಹೋಗಲಿ ಕಲಾವಿದರೊಂದಿಗೆ ಕಾರ್ಯದರ್ಶಿ ಎಂ.ವೆಂಕೋಬರಾವ್ ಜೊತೆಯಲ್ಲಿರಲೇಬೇಕು. ದೇವರಮಳ್ಳೂರಿನ ಕೋದಂಡರಾಮಸ್ವಾಮಿ ಸಾಂಸ್ಕೃತಿಕ ತಂಡದ ಮಕ್ಕಳ ಪಂಡರಿ ಭಜನೆಯು ಎಂಥಹವರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು. ಈ ಕಲೆಯನ್ನು ಹಬ್ಬ, ಹರಿದಿನ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಪಡೆದಿತ್ತು. ಮೇಲು ಕೀಳೆಂಬುದಿಲ್ಲದೆ, ಸಹಕಾರ ಮನೋಭಾವದಿಂದ, ಹಬ್ಬ ಹರಿದಿನಂದು ಶಿಸ್ತು ಮತ್ತು ಭಕ್ತಿಯಿಂದ ಜಂಡಾ, ಕೋಲಾಟ, ಸಾಲುಕಳಸ, ಚಕ್ಕೆ ಮೇಲೆ ಕಳಸ ಕುಣಿತದೊಂದಿಗೆ ಸಾರ್ವಜನಿಕರಿಗೆ ಸಂತೋಷ, ಆನಂದ ನೀಡುತ್ತಾ ಭಕ್ತಿಯ ಅಲೆಯಲ್ಲಿ ತೇಲಿಸುತ್ತಿದ್ದರು.
ದೇವರಮಳ್ಳೂರಿನ ಗ್ರಾಮಾಂತರ ಮಕ್ಕಳು ಈ ಕಲೆಯನ್ನು ಮುಖ್ಯವಾಗಿ ಝಂಡಾ, ಕೋಲಾಟ, ಸಾಲು ಕಳಸ ನೃತ್ಯ, ದೀಪ ನೃತ್ಯ, ಅಷ್ಟ ಕಳಸ ನೃತ್ಯವನ್ನು ಸುಮಾರು 2 ರಿಂದ 3 ಕೆ.ಜಿ ಯವರೆಗೆ ಭಾರ ಹೊತ್ತು ಮಂಗಳದ ಹಾಡಿನೊಂದಿಗೆ ಮುಕ್ತಾಯಗೊಳಿಸುತ್ತಿದ್ದರು. ಈ ಕಲೆಯನ್ನು ಸಮಯದ ಅವಕಾಶಕ್ಕೆ ತಕ್ಕಂತೆ 10 ನಿಮಿಷದಿಂದ 3 ಗಂಟೆಯ ಕಾಲದವರೆಗೂ ಪ್ರದರ್ಶಿಸಲಾಗುತ್ತಿತ್ತು. 9 ರಿಂದ 14 ವರ್ಷದ ವಯಸ್ಸಿನ ಸುಮಾರು 25 ಬಾಲಕಿಯರು ಇವರ ತಂಡದಲ್ಲಿರುತ್ತಿದ್ದರು.
ಈ ಕಲೆಯನ್ನು ಕೈವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರಿನ ವಿಶ್ವ ಕನ್ನಡ ಸಮ್ಮೇಳನ, ಅರಮನೆ ಮುಂಭಾಗ, ದಸರಾ ವಸ್ತು ಪ್ರದರ್ಶನ, ರಾಷ್ಟ್ರೀಯ ಬಾವೈಕ್ಯತಾ ಸಮ್ಮೇಳನ, ಅಂತರರಾಜ್ಯ ಯುವಜನ ಮೇಳ, ಸಾಂಸ್ಕೃತಿಕ ಕಲಾ ನೃತ್ಯಮೇಳ, ಕೇರಳ, ಬೆಂಗಳೂರು, ಮುಂಬಯಿ, ಪಾಂಡಿಚೆರಿ, ನಾಗಪುರ, ಹಂಪೆಯಲ್ಲಿ ನಡೆದಿದ್ದ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಹೆಸರುಗಳಿಸಿದ್ದರು.
‘ಒಂದು ಕಾಲದಲ್ಲಿ ತಲೆಯ ಮೇಲೆ ಯಾವುದೇ ಆಧಾರವಿಲ್ಲದೇ ಸಾಲು ಕಳಸಗಳನ್ನು ಹೊತ್ತು ನಮ್ಮ ಗ್ರಾಮದ ಮಕ್ಕಳು ನಮ್ಮ ದೇವರಮಳ್ಳೂರು, ಶಿಡ್ಲಘಟ್ಟ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಮೆರೆಸಿದ್ದರು. 1992 ರವರೆಗೂ ನಡೆದು ಬಂದು ಈ ಕಲಾ ಪರಂಪರೆ ನಿಂತುಹೋಯಿತು. ನಿರಂತರ ಪರಿಶ್ರಮ, ತಾಲೀಮು, ತರಬೇತಿ, ಆಸಕ್ತಿ, ಕಲಾಪೋಷಣೆ, ಪ್ರೋತ್ಸಾಹ ಇವುಗಳಲ್ಲಿ ಯಾವುದೂ ಕಡಿಮೆಯಾಗದಂತೆ ಹಲವು ವರ್ಷಗಳ ಕಾಲ ನಡೆಸಿದೆವು. ಮುಂದೆ ಈ ಪರಂಪರೆಯನ್ನು ಮುಂದುವರೆಸುವವರು ಬಂದಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡುತ್ತೇನೆ’ ಎಂದು ಎ.ವೆಂಕೋಬರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!