ರೇಷ್ಮೆ ಆಮದು ಸುಂಕದ ಇಳಿಕೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ರೈತರು ಹಾಗೂ ರೀಲರುಗಳಿಗೆ ನೆರವಾಗಲು ಸರ್ಕಾರ ಈಗಾಗಲೇ ಚಿಂತನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಹಣಕಾಸು ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ರೇಷ್ಮೆ ಕೃಷಿ ಆಯುಕ್ತ ಜಿ.ಸತೀಶ್ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಭಾನುವಾರ ಸಂಜೆ ಭೇಟಿ ನೀಡಿ, ರೈತರು ಹಾಗೂ ರೀಲರುಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರತಿ ಬಜೆಟ್ ಸಮಯದಲ್ಲೂ ರಾಜ್ಯ ಸರ್ಕಾರದಿಂದ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳ ಸಮಸ್ಯೆಗಳ ಬಗ್ಗೆ ಹಾಗೂ ಅವರ ಅಗತ್ಯತೆಗಳ ಬಗ್ಗೆ ಪತ್ರವನ್ನು ಬರೆಯಲಾಗುತ್ತಿದೆ. ಈ ಮುಂಚೆಯೂ ಕೂಡಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು, ಕೇಂದ್ರ ಸರ್ಕಾರದಿಂದಲೂ ಕೂಡಾ ರಾಜ್ಯಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ದುರಾದೃಷ್ಟವಶಾತ್ ಶೇ. ೧೦ ಕ್ಕೆ ಇಳಿಕೆಯಾಗಿದ್ದ ಪರಿಣಾಮ ಒಂದೇ ಬಾರಿಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಗೂಡಿನ ಧರ ಹಾಗೂ ರೇಷ್ಮೆ ನೂಲಿನ ಧರದಲ್ಲಿ ಇಳಿಮುಖವಾಯಿತು. ರಾಜ್ಯದ ಇಂಧನ ಸಚಿವರು ಸೇರಿದಂತೆ ಎಲ್ಲಾ ಸಂಸದರ ನಿಯೋಗ ಕೇಂದ್ರದ ವಿತ್ತಸಚಿವರನ್ನು ಸಂಪರ್ಕ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳನ್ನು ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಪ್ರತಿನಿತ್ಯ ಸುಮಾರು ೭೦ ಟನ್ಗಿಂತಲೂ ಹೆಚ್ಚು ಗೂಡು ಬರುತ್ತಿರುವ ಶಿಡ್ಲಘಟ್ಟದ ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರುಗಳಿಗೆ ಉಪಯೋಗವಾಗುವ ರೀತಿಯಲ್ಲಿ ಇ–-ಬೀಡ್ ಪದ್ಧತಿಯನ್ನು ಜಾರಿಗೆ ತರುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಪದ್ದತಿಯಲ್ಲಿ ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ, ರೈತರಿಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದು, ರೈತರು ಗೂಡು ತಂದು ಕೌಂಟರ್ನಲ್ಲಿ ನೀಡುತ್ತಿದ್ದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.
ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯು ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಮಾರುಕಟ್ಟೆಯಾಗಿದ್ದರೂ ಕೂಡಾ ಇಲ್ಲಿನ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯಿಲ್ಲದೆ, ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಕಷ್ಟಕರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೂ ಸಮಸ್ಯೆಯುಂಟಾಗಲಿದೆ, ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನೇಮಕ ಮಾಡಬೇಕು, ರೈತರೊಂದಿಗೆ ಸಿಬ್ಬಂದಿ ಉತ್ತಮ ವರ್ತನೆಯನ್ನು ಹೊಂದಿರಬೇಕು, ಬಹಳಷ್ಟು ಮಂದಿ ರೈತರು ಅವಿದ್ಯಾವಂತರು ಬರುತ್ತಾರೆ ಅವರಿಗೆ ಸಿಬ್ಬಂದಿ ನೆರವಾಗಬೇಕು. ಗೂಡುತರುವಂತಹ ವಾಹನಗಳು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಮಹಿಳಾ ರೈತರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಮಾರುಕಟ್ಟೆಯ ಆವರಣದಲ್ಲೆ ಬ್ಯಾಂಕಿನ ವ್ಯವಸ್ಥೆಯನ್ನು ಮಾಡಿಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೆ ಒಂದೇ ಕಡೆಯಲ್ಲೆ ಜಾಲರಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರಾಮನಗರ, ಚನ್ನಪಟ್ಟಣದ ರೀಲರುಗಳಿಗೆ ನೀಡುವಂತೆ ಸಾಲದ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ನಮಗೆ ಬಡ್ಡಿಯಲ್ಲಿ ಶೇ. ೫ ರಷ್ಟಿ ರಿಯಾಯಿತಿ ನೀಡಬೇಕು, ಪ್ರತಿವರ್ಷದಲ್ಲಿ ರೇಷ್ಮೆ ಆಮದು ಸುಂಕದ ಬೆಲೆ ಕಡಿಮೆಯಾದಾಗಲೆಲ್ಲಾ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದ್ದೇವೆ, ಆದರೆ ನಮಗೆ ಮಾರುಕಟ್ಟೆಯ ಸೌಲಭ್ಯವೂ ಇಲ್ಲದೆ, ಗೂಡಿನಿಂದ ಬಿಚ್ಚಾಣಿಕೆ ಮಾಡಿದ ರೇಷ್ಮೆಯನ್ನು ಮನೆಯಲ್ಲಿಟ್ಟುಕೊಂಡು ನಷ್ಟವನ್ನು ಅನುಭವಿಸುತ್ತಿದ್ದೇವೆ, ರೇಷ್ಮೆ ನೂಲನ್ನು ಕೆ.ಎಸ್.ಎಂ.ಬಿ ಯಿಂದ ಖರೀದಿ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ರೀಲರುಗಳು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಅಪರ ನಿರ್ದೇಶಕ ಅರಹುಣಸೆ, ಜಂಟಿ ನಿರ್ದೇಶಕ ಪ್ರಭಾಕರ್, ಚಿಕ್ಕಬಳ್ಳಾಪುರ ಉಪನಿರ್ದೇಶಕ ನಾಗಭೂಷಣ್, ಕೇಂದ್ರ ಕಚೇರಿಯ ಉಪನಿರ್ದೇಶಕ ಸುಭ್ರಮಣ್ಯಂ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಉಪನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಎಚ್.ಕೆ.ಸುರೇಶ್, ರೀಲರುಗಳಾದ ಅನ್ವರ್, ನಾಗನರಸಿಂಹ, ನರಸಿಂಹಮೂರ್ತಿ, ಎಸ್.ಎಂ.ರಮೇಶ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -