ನವೆಂಬರ್ ಒಂದರಂದು ತಾಲ್ಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನವೆಂಬರ್ 1ನೇ ತಾರೀಖಿನಂದು ಎಲ್ಲಾ ಕಚೇರಿಗಳಿಗೂ ದೀಪಾಲಂಕಾರಗಳನ್ನು ಮಾಡಿ ಸರ್ಕಾರಿ ಆದೇಶದಂತೆ ಎಲ್ಲಾ ಅಧಿಕಾರಿಗಳೂ ಹಾಜರಿದ್ದು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ನಾಡ ಹಬ್ಬವನ್ನು ಆಚರಿಸೋಣ. ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿದೆ 60ನೇ ಕನ್ನಡ ರಾಜ್ಯೋತ್ಸವವನ್ನು ತಾಲ್ಲೂಕು ನಾಡಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ವಿಜೃಂಭಣೆಯಿಂದ ನವೆಂಬರ್ 16 ರ ಸೋಮವಾರದಂದು ಆಚರಿಸುವುದಾಗಿ ಸಭೆಯ ತೀರ್ಮಾನದಂತೆ ಪ್ರಕಟಿಸಿದರು.
ತಾಲ್ಲೂಕಿನ ವಿವಿಧ ಇಲಾಖೆಗಳು ತಮ್ಮ ಇಲಾಖೆಯ ಕುರಿತಂತೆ ಮಾಹಿತಿ ನೀಡುವ ಸ್ತಬ್ದಚಿತ್ರಗಳನ್ನು ವಾಹನಗಳಿಗೆ ಅಳವಡಿಸಿ ನಾಡದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಾಂಸ್ಕೃತಿಕ ಕಲಾ ತಂಡಗಳು, ಜಾನಪದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಕೃ.ನಾ.ಶ್ರೀನಿವಾಸ ಮೂರ್ತಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಯಕ್, ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು, ಕನ್ನಡಪರ ಸಂಘಟನೆಯ ಸದಸ್ಯರು, ವಿವಿಧ ಇಲಾಖೆಗಳ ಅಧಕಾರಿಗಳು ಸಭೆಯಲ್ಲಿ ಹಾಜರಿದ್ದರು.