Home News ನಡಿಪಿನಾಯಕನಹಳ್ಳಿ ಗ್ರಾಮದ ಯುವಕರಿಂದ ರಕ್ತದಾನ

ನಡಿಪಿನಾಯಕನಹಳ್ಳಿ ಗ್ರಾಮದ ಯುವಕರಿಂದ ರಕ್ತದಾನ

0

ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ಗ್ರಾಮದ ಯುವಕರನ್ನು ರಕ್ತದಾನದಂಥಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜು ಆವರಣದಲ್ಲಿ ರೆಡ್ಕ್ರಾಸ್ ಸೊಸೈಟಿ ಮತ್ತು ಲೋಕಮಾತಾ ಎಜುಕೇಷನಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿ, ಹೊಸ ಜೀವ ನೀಡಬಲ್ಲದು. ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ ರಕ್ತದಾನ ಮಾಡಿದವರಿಗೂ ಕೂಡ ಅನುಕೂಲವಾಗಲಿದೆ. ರಕ್ತದಿಂದ ವಿವಿಧ ರೋಗಿಗಳ ಗಾಯಗಳ ಚಿಕಿತ್ಸೆಗೆ ಬೇಕಾಗುವ ಮತ್ತು ಜೀವ ಉಳಿಸಲು ಅಗತ್ಯವಿರುವ ರಕ್ತ ದೊರಕುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಾಕಷ್ಟು ಜನರಿಗೆ ರಕ್ತ ದಾನ ಮಾಡಿದವರು ದೇವರಿದ್ದಂತೆ. ಒಂದು ಜೀವವನ್ನು ಉಳಿಸುವ ಈ ಕಾರ್ಯದಿಂದ ಆಗುವ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು ಎಂದು ಹೇಳಿದರು. ರಕ್ತದಾನ ಶಿಬಿರದಲ್ಲಿ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ, ರೆಡ್ಕ್ರಾಸ್ ಸೊಸೈಟಿಯ ಗುರುರಾಜರಾವ್, ನಾರಾಯಣಾಚಾರ್, ಪ್ರಾಂಶುಪಾಲ ಸತ್ಯನಾರಾಯಣ, ಸುದರ್ಶನ್, ಸುಮಾ, ರೂಪಾ, ಪ್ರಕಾಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಅಭಿವೃದ್ಧಿ ಅಧಿಕಾರಿ ಗೋಪಿನಾಥ್, ಸದಸ್ಯ ರಾಮಕೃಷ್ಣಪ್ಪ, ರವಿ ಲಂಬಾಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.