ಸ್ಥಳಿಯ ನಗರಸಭೆಯ ಮೊದಲ ಅವಧಿ ಸೆಪ್ಟೆಂಬರ್ 17 ಕ್ಕೆ ಮುಕ್ತಾಯವಾಗಲಿದೆ. ಮುಂದಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಸೆಪ್ಟೆಂಬರ್ 16ಕ್ಕೆ ನಿಗದಿಪಡಿಸಲಾಗಿದೆ. ಆಕಾಂಕ್ಷಿಗಳು ಅಧಿಕಾರ ಗಿಟ್ಟಿಸಲು ರಾಜಕೀಯ ಕಸರತ್ತು ನಡೆಸಲಾರಂಭಿಸಿದ್ದಾರೆ.
ನಗರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಇದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನ ಕಾಂಗ್ರೆಸ್ಗೆ ಲಭಿಸುವುದು ಖಚಿತವಾದರೂ, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್ನ ಒಬ್ಬ ಅಭ್ಯರ್ಥಿಯನ್ನು ತಮ್ಮೆಡೆಗೆ ಸೆಳೆದು ಅಧಿಕಾರವನ್ನು ಪಡೆಯುವ ತಂತ್ರಗಾರಿಕೆಯನ್ನು ಜೆಡಿಎಸ್ ಪಕ್ಷದವರು ನಡೆಸಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ, ಗಾಣಿಕ, ಗೊಲ್ಲ, ಪದ್ಮಶಾಲಿ, ಬೆಸ್ತ ಸಮುದಾಯದವರು ಮೀಸಲಿನ ಕಾರಣ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ನಿಂದ ಮೂವರು ಪುರುಷರು, ನಾಲ್ವರು ಮಹಿಳಾ ಸದಸ್ಯರು ಪ್ರಭಲ ಆಕಾಂಕ್ಷಿಗಳಾಗಿದ್ದರೆ, ಜೆಡಿಎಸ್ನಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳಾ ಸದಸ್ಯೆ ಶಾಸಕರ ಬೆಂಬಲದಿಂದ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದಾರೆ.
ವಿಧಾನ ಸಭೆಯ ಚುನಾವಣೆಗೆ ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದರಿಂದ ತಮಗೆ ಅಧಿಕಾರ ನೀಡಿದಲ್ಲಿ ನಗರ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಪಕ್ಷವನ್ನು ಸದೃಢಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ದೃಷ್ಟಿಯಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮುಂದಿನ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದಲ್ಲಿನ ಪೈಪೋಟಿಯಲ್ಲಿ ಯಾರ ಹೆಸರನ್ನು ಸೂಚಿಸುವರು ಎಂಬುದು ನಿಗೂಢವಾಗಿದೆ. ಇತ್ತ ಜೆಡಿಎಸ್ ಪಾಳೆಯದಲ್ಲೂ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಹಣದ ಹೊಳೆ ಹರಿಯುವ ಎಲ್ಲ ಸೂಚನೆಗಳೂ ಕಂಡುಬರುತ್ತಿದೆ. ಅಧ್ಯಕ್ಷ ಸ್ಥಾನವನ್ನು ಗುರಿಯಾಗಿಟ್ಟುಕೊಂಡವರು ತಮ್ಮನ್ನು ಆಯ್ಕೆ ಮಾಡಲು ಇತರ ಸದಸ್ಯರ ವಿಶ್ವಾಸ ಗಿಟ್ಟಿಸಲು ಸಕಲ ಪ್ರಯತ್ನಗಳಲ್ಲೂ ನಿರತರಾಗಿದ್ದಾರೆ.
- Advertisement -
- Advertisement -
- Advertisement -
- Advertisement -