Home News ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಡ್ಡಮತ ಹಾಕಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ...

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಡ್ಡಮತ ಹಾಕಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ

0

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತ ಹಾಕಿದ ನಗರಸಭೆಯ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ನಗರಸಭೆ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಆದೇಶ ಹೊರಡಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆಯ ೪ನೇ ವಾರ್ಡಿನ ಸುಹೇಲ್ ಅಹ್ಮದ್, ೭ನೇ ವಾರ್ಡಿನ ಎಚ್.ಎಸ್.ನಯಾಜ್, ೧೬ನೇ ವಾರ್ಡಿನ ಸಿಕಂಧರ್ ಹಾಗೂ ೨೬ನೇ ವಾರ್ಡಿನ ವಹಿದಾ ಕೌಸರ್‌ರನ್ನು ನಗರಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕಳೆದ ೨೦೧೬ರ ಸೆಪ್ಟೆಂಬರ್ ೧೬ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಅಡ್ಡ ಮತ ಚಲಾಯಿಸಿದ ಈ ನಾಲ್ವರ ವಿರುದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಹಾಗೂ ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ ಸದಸ್ಯ ಎಸ್.ಬಿ.ಬಾಬು(ಯಮಹಾ ಬಾಬು) ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ನಾಲ್ವರು ಕಾಂಗ್ರೆಸ್ ಸದಸ್ಯರು ವಜಾ ಆಗುವ ಮೂಲಕ ನಗರಸಭೆಯಲ್ಲಿನ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೦ಕ್ಕೆ ಇಳಿದಿದೆ. ಜೆಡಿಎಸ್‌ನ ೧೧ ಹಾಗೂ ಬಿಜೆಪಿ, ಪಕ್ಷೇತರ ತಲಾ ಒಬ್ಬರು ಸದಸ್ಯರಿದ್ದಾರೆ.
೨೦೧೬ರ ಸೆಪ್ಟೆಂಬರ್‌ ೧೬ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕಾಂಗ್ರೆಸ್‌ನಿಂದ ಎಸ್.ಬಿ.ಬಾಬು, ಸುಗುಣ ಲಕ್ಷ್ಮೀನಾರಾಯಣ್ ಹಾಗೂ ಜೆಡಿಎಸ್‌ನಿಂದ ಅಪ್ಸರ್ ಪಾಷ, ಪ್ರಭಾವತಿ ಸುರೇಶ್ ಸ್ಪರ್ಧಿಸಿದ್ದರು. ಒಟ್ಟು ೨೭ ಸದಸ್ಯ ಸಂಖ್ಯೆಯ ನಗರಸಭೆಯಲ್ಲಿ ಕಾಂಗ್ರೆಸ್‌ನ ೧೪ ಸದಸ್ಯರಿದ್ದು ಎಲ್ಲರಿಗೂ ಜಿಲ್ಲಾ ಕಾಂಗ್ರೆಸ್‌ನಿಂದ ವಿಪ್ ಜಾರಿ ಮಾಡಿತ್ತು. ಆದರೆ ಇದೀಗ ವಜಾ ಆಗಿರುವ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪಕ್ಷದ ಅಫ್ಸರ್ ಪಾಷ, ಪ್ರಭಾವತಿ ಸುರೇಶ್‌ಗೆ ಅಡ್ಡ ಮತ ಹಾಕಿದ್ದರು.
ತೀವ್ರ ಜಿದ್ದಾ ಜಿದ್ದಿಯಿಂದ ನಡೆದ ಈ ಚುನಾವಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಎಂ.ರಾಜಣ್ಣ ಸಹ ಮತಚಲಾಯಿಸಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಎಸ್.ಬಾಬು ಹಾಗೂ ಸುಗುಣಲಕ್ಷ್ಮೀನಾರಾಯಣ್ ಸಂಸದರ ಮತವೂ ಸೇರಿದಂತೆ ಒಟ್ಟು ೧೧ ಮತಗಳಿಸಿ ಪರಾಭವಗೊಂಡರೆ ಶಾಸಕರ ಮತ ಸೇರಿದಂತೆ ೧೮ ಮತಗಳನ್ನು ಗಳಿಸುವ ಮೂಲಕ ಜೆಡಿಎಸ್‌ನ ಅಫ್ಸರ್‌ಪಾಷ ಹಾಗು ಪ್ರಭಾವತಿ ಸುರೇಶ್ ಜಯಗಳಿಸಿದ್ದರು.
ನಗರಸಭೆಯಲ್ಲಿ ೧೪ ಸ್ಥಾನಗಳೊಂದಿಗೆ ಕಾಂಗ್ರೆಸ್‌ಗೆ ಬಹುಮತ ಇದ್ದರೂ ಸಹ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿತ್ತು. ಇದರಿಂದ ತಾಲ್ಲೂಕು ಕಾಂಗ್ರೆಸ್‌ ತೀವ್ರ ತಮಗಾದ ಮುಖಭಂಗದಿಂದ ಅಡ್ಡ ಮತದಾನದ ವಿರುದ್ದ ದೂರು ನೀಡಲಾಗಿತ್ತು.
ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ ೧೯೮೭ರ ನಿಯಮದಡಿ ಅಡ್ಡ ಮತದಾನ ಮಾಡಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ನಗರಸಭಾ ಸದಸ್ಯ ಸ್ಥಾನದಿಂದ ವಜಾ ಗೊಳಿಸಿ ಆದೇಶಿಸಿದ್ದಾರೆ.