Home News ನಗರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ನಗರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

0

ನಗರದಲ್ಲಿ ಶುಕ್ರವಾರ ನಡೆದ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹತ್ತೊಂಬತ್ತನೇ ವಾರ್ಡ್ನ ಜೆಡಿಎಸ್ ಸದಸ್ಯ ಅಧ್ಯಕ್ಷರಾಗಿ, ಹದಿನೈದನೇ ವಾರ್ಡ್ನ ಜೆಡಿಎಸ್ ಸದಸ್ಯೆ ಎಸ್.ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಆದರೂ ಜೆಡಿಎಸ್ ಪಕ್ಷ ಅಧಿಕಾರ ಗಿಟ್ಟಿಸಿಕೊಂಡಿರುವುದು ಕುತೂಹಲಕ್ಕೆ ಎಡೆಮಾಡಿತು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿತ್ತು. ವಿಧಾನ ಸಭೆಯ ಚುನಾವಣೆಗೆ ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದರಿಂದ ಯಾವ ಪಕ್ಷ ನಗರಸಭೆಯ ಚುಕ್ಕಾಣಿ ಹಿಡಿಯುವುದೆಂಬ ಕುತೂಹಲ ಜನಸಾಮಾನ್ಯರದ್ದಾಗಿತ್ತು. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ದೃಷ್ಟಿಯಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕುತೂಹಲ ಮೂಡಿಸಿತ್ತು.
ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದು ಅದರಲ್ಲಿ ಕಾಂಗ್ರೆಸ್ ನ ಸಿಕಂದರ್ ಮತ್ತು ಜೆಡಿಎಸ್ನ ಲಕ್ಷ್ಮಯ್ಯ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಂತಿಮವಾಗಿ ಜೆಡಿಎಸ್ನ ಅಪ್ಸರ್ ಪಾಷ ಮತ್ತು ಕಾಂಗ್ರೆಸ್ನ ಯಮಹ ಬಾಬು ಮಾತ್ರ ಕಣದಲ್ಲಿ ಉಳಿದುಕೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಪ್ರಭಾವತಿ ಸುರೇಶ್ ಮತ್ತು ಕಾಂಗ್ರೆಸ್ನ ಸುಗುಣ ಲಕ್ಷ್ಮಿನಾರಾಯಣ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ನ ಅಪ್ಸರ್ ಪಾಷ ಮತ್ತು ಪ್ರಭಾವತಿ ಸುರೇಶ್ ಅವರ ಪರವಾಗಿ ೧೭ ಸದಸ್ಯರು ಹಾಗೂ ಶಾಸಕ ಎಂ.ರಾಜಣ್ಣ ಮತ ಚಲಾಯಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಬಾಬು ಮತ್ತು ಸುಗುಣ ಲಕ್ಷ್ಮಿನಾರಾಯಣ ಅವರ ಪರವಾಗಿ ಒಟ್ಟು ೧೦ ಸದಸ್ಯರು ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಕೈಯೆತ್ತುವ ಮುಖಾಂತರ ಸಹಮತ ವ್ಯಕ್ತಪಡಿಸಿದ್ದರಿಂದ ಜೆಡಿಎಸ್ನ ಅಪ್ಸರ್ಪಾಷ ಅಧ್ಯಕ್ಷರಾಗಿ ಹಾಗು ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆ ಮುಂದೆ ಬೆಳಗ್ಗೆಯಿಂದಲೇ ಹಾಜರಿದ್ದ ಜೆಡಿಎಸ್ ಬೆಂಬಲಿಗರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ವಿಷಯ ತಿಳಿಯುತ್ತಿದ್ದಂತೆ ನಗರದ ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯ ಹಿನ್ನಲೆಯಲ್ಲಿ ನಗರಸಭೆ ಸುತ್ತ ಮುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳದಲ್ಲಿ ಚಿಂತಾಮಣಿ ಉಪಾವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಸೇರಿದಂತೆ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್, ನಗರಠಾಣೆ ಪಿಎಸ್ಸೈ ನವೀನ್ ಹಾಜರಿದ್ದರು.
ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಅಮರೇಶ್ ಕರ್ತವ್ಯ ನಿರ್ವಹಿಸಿದರೆ ತಹಸೀಲ್ದಾರ್ ಕೆ.ಎಂ.ಮನೋರಮಾ, ನಗರಸಭಾ ಆಯುಕ್ತ ಎಚ್.ಎ.ಹರೀಶ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮೇಲೂರು ರವಿಕುಮಾರ್, ಆರ್.ಎ.ಉಮೇಶ್ ಹಾಜರಿದ್ದರು.
ಶಾಸಕ ಹಾಗು ಸಂಸದರ ಮತ ಚಲಾವಣೆ: ಸಂಖ್ಯಾಬಲದ ಕೊರತೆಯನ್ನು ಮೊದಲೇ ಅರಿತಿದ್ದ ಕಾಂಗ್ರೆಸ್ ಪಕ್ಷದವರು ಎರಡನೇ ಭಾರಿಗೆ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಮತಚಲಾಯಿಸಲು ಕರೆತಂದಿದ್ದರಾದರೂ ಈ ಭಾರಿಯ ನಗರಸಭೆ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಸಿಕಂದರ್ ಹಾಗೂ ಮೂವರು ಬೆಂಬಲಿಗರು ಸೇರಿ ಒಟ್ಟು ನಾಲ್ಕು ಮಂದಿ ಸದಸ್ಯರು ಜೆಡಿಎಸ್ ಅಭ್ಯರ್ಥಿಯ ಪರ ಮತ ಚಲಾಯಿಸಿದ್ದರಿಂದ ನಗರಸಭೆಯಲ್ಲಿ ೧೪ ಜನ ಸದಸ್ಯರ ಸಂಖ್ಯೆಯನ್ನು ಹೊಂದಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಗರಸಭೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರಾಗಿ ಆಯ್ಕೆಯಾಗದೇ ಸೋಲನ್ನು ಅನುಭವಿಸುವಂತಾಯಿತು.
ಜೆಡಿಎಸ್ ಪಕ್ಷದ ಒಟ್ಟು ೧೧ ಸದಸ್ಯರು ಹಾಗು ಪಕ್ಷೇತರ ಅಭ್ಯರ್ಥಿ ಪಿ.ಕೆ.ಕಿಷನ್(ನಂದು) ಮತ್ತು ಬಿಜೆಪಿ ಅಭ್ಯರ್ಥಿ ಎಸ್.ರಾಘವೇಂದ್ರ ಸೇರಿದಂತೆ ಶಾಸಕ ಎಂ.ರಾಜಣ್ಣ ಹಾಗೂ ಕಾಂಗ್ರೆಸ್ನ ಸದಸ್ಯರಾದ ನಗರದ ೪ ನೇ ವಾರ್ಡಿನ ಸುಹೇಲ್, ೭ ನೇ ವಾರ್ಡಿನ ನಯಾಜ್, ೧೬ ನೇ ವಾರ್ಡಿನ ಸಿಕಂದರ್ ಮತ್ತು ೨೬ ನೇ ವಾರ್ಡಿನ ವಹೀದಾಕೌಸರ್ ಜೆಡಿಎಸ್ ಅಭ್ಯರ್ಥಿ ಅಪ್ಸರ್ಪಾಷ ಹಾಗೂ ಪ್ರಭಾವತಿಸುರೇಶ್ ಪರವಾಗಿ ಮತ ಚಲಾಯಿಸಿದ್ದರಿಂದ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಯಿತು.
ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಸಹ ಜೆಡಿಎಸ್ ಅಭ್ಯರ್ಥಿಗಳು ಅತ್ಯಂತ ಹೆಚ್ಚಿನ ಬಹುಮತದಿಂದ ಜಯಭೇರಿಯನ್ನು ಸಾಧಿಸಿದ್ದಾರೆ. ಮತ ಹಾಕಿ ಬೆಂಬಲಿಸಿದ ಸದಸ್ಯರಿಗೆ ಧನ್ಯವಾದಗಳು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಬೇಕು.
– ಶಾಸಕ ಎಂ.ರಾಜಣ್ಣ
ನಮಗೆ ಮತ ನೀಡಿ ಗೆಲ್ಲಿಸಿದ ಮತ ಬಾಂಧವರು ಹಾಗೂ ಈ ದಿನ ಬೆಂಬಲಿಸಿದ ನಗರಸಭೆ ಸದಸ್ಯರಿಗೆ ಋಣಿಯಾಗಿರುತ್ತೇನೆ. ಶಾಸಕರು ಮತ್ತು ನಮ್ಮ ಮುಖಂಡರ ಸಲಹೆಯ ಮೇರೆಗೆ ನಗರದ ಅಭಿವೃದ್ಧಿಗೆ ಕಾರ್ಯಪ್ರವೃತ್ತನಾಗುತ್ತೇನೆ.
– ನೂತನ ಅಧ್ಯಕ್ಷ ಅಫ್ಸರ್ಪಾಷ