Home News ನಗರದ ಸ್ವಚ್ಛತೆಗಾಗಿ ಡಿ.ಪಿ.ಆರ್ ವರದಿ

ನಗರದ ಸ್ವಚ್ಛತೆಗಾಗಿ ಡಿ.ಪಿ.ಆರ್ ವರದಿ

0

ನಗರದ ಸ್ವಚ್ಛತೆ ಕಾಪಾಡಲು ಸ್ವಚ್ಛಭಾರತ್ ಮಿಶನ್ ಯೋಜನೆಗಾಗಿ ಡಿ.ಪಿ.ಆರ್ ವರದಿ ತಯಾರಿಸಲಾಗಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ 20 ಟನ್ ಕಸ ವಿಲೇವಾರಿ ಮಾಡುವ ರೂಪುರೇಷೆಯನ್ನು ಸಿದ್ಧಪಡಿಸಿರುವುದಾಗಿ ಪೌರಾಯುಕ್ತ ಹರೀಶ್ ತಿಳಿಸಿದರು.
ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರಸಭೆ ಸದಸ್ಯರು ಈ ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅನುಮೋದಿಸಬೇಕೆಂದು ಹೇಳಿದರು.
2011ರ ಜನಗಣತಿಯ ಪ್ರಕಾರ ನಗರದ ಜನಸಂಖ್ಯೆ 51,159 ರಷ್ಟಿದೆ. 5 ಚದರ ಕಿಮೀ ನಗರವನ್ನು 27 ವಾರ್ಡುಗಳಾಗಿ ವಿಂಗಡಿಸಲಾಗಿದ್ದು, 70 ಕಿಮೀರಷ್ಟು ರಸ್ತೆಗಳನ್ನು ಹೊಂದಿದೆ. 10,159 ಮನೆಗಳಿವೆ. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ವರದಿನ್ನು ತಯಾರಿಸಿದೆ. ಕೇಂದ್ರದಿಂದ ಸಿಗುವ ಅನುದಾನಗಳನ್ನು ಬಳಸಿ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬಹುದು. ಹೆಚ್ಚು ಮಂದಿ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ ಎಂದು ವಿವರಿಸಿದರು.
ಸಭೆಯಲ್ಲಿ ಎಂಜಿನಿಯರ್ ರಂಗನಾಥ್ ಡಿ.ಪಿ.ಆರ್ ವರದಿಯನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ನಗರಸಭಾ ಸದಸ್ಯರಿಗೆ ವಿವರಿಸಿದರು.
ನಗರಸಭಾ ಸದಸ್ಯ ಇಲಿಯಾಜ್, ‘ನಮ್ಮ ವಾರ್ಡ್ ಸ್ವಚ್ಛಗೊಳಿಸುತ್ತಿಲ್ಲ. ನೀರಿನ ಅನಾನುಕೂಲತೆಯಿದೆ. ಶಾಲೆಯ ಬಳಿ ಇದುವರೆಗೂ ನೀರಿನ ನಲ್ಲಿ ಹಾಕಲು ಆಗಿಲ್ಲ. ಎಷ್ಟೋಬಾರಿ ಈ ಬಗ್ಗೆ ತಿಳಿಸಿದರೂ ಕೆಲಸ ಮಾಡಿಲ್ಲ. ಈ ತಾರತಮ್ಯ ಧೋರಣೆ ಏಕೆ’ ಎಂದು ಪೌರಾಯುಕ್ತ ಹರೀಶ್ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಪೌರಾಯುಕ್ತರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕೆಲವು ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದ ನಂತರ ಸಭೆ ಮುಂದುವರೆಯಿತು. ಸಭೆಯಲ್ಲಿ ನಗರಸಭೆಯ ಸದಸ್ಯರು ಹಾಜರಿದ್ದರು.