Home News ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ

ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ

0

ಶಿಡ್ಲಘಟ್ಟ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಇದೀಗ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ. ನಗರದ ಸ್ವಚ್ಚತೆ ಸೇರಿದಂತೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ೨೦೧೭–೧೮ ನೇ ಸಾಲಿಗೆ ಆಯ-ವ್ಯಯ ಅಂದಾಜುಪಟ್ಟಿ ತಯಾರಿಸಲು ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಬಹುತೇಕ ಜನರ ನಿರೀಕ್ಷೆಯಂತೆ ಮುಂದಿನ ಆರು ತಿಂಗಳೊಳಗೆ ನಗರದ ಎಲ್ಲಾ ವಾರ್ಡುಗಳ ರಸ್ತೆ ಕಾಮಗಾರಿ ಮತ್ತು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ತಾಲ್ಲೂಕಿನ ಈ ತಿಮ್ಮಸಂದ್ರ ಬಳಿಯ ನಲ್ಲಸಾನಿ ಕೆರೆ ಹಾಗು ರಾಜಸಾನಿ ಕೆರಗಳಿಂದ ನಗರಕ್ಕೆ ನೀರು ಪೂರೈಸಲು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದ್ದು ತಮ್ಮ ಅವಧಿಯೊಳಗೆ ಈ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು.
ನಗರದ ವಿವಿಧ ಮುಖಂಡರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸಿದ ಅವರು ದೇಶದಲ್ಲಿಯೇ ಅತ್ಯಂತ ದೊಡ್ಡ ರೇಷ್ಮೆ ಮಾರುಕಟ್ಟೆ ಇರುವ ಶಿಡ್ಲಘಟ್ಟಕ್ಕೆ ಯಾರಾದರೂ ಹೊಸಬರು ಬಂದರೆ ಯಾವುದೇ ನಾಮಫಲಕಗಳಿಲ್ಲದೇ ಪರದಾಡುವುದರಿಂದ ನಗರಸಭೆಯಿಂದ ನಗರದ ನಾಲ್ಕು ದಿಕ್ಕುಗಳಲ್ಲಿಯೂ ಬೃಹತ್ ಸ್ವಾಗತ ನಾಮಫಲಕ ಅಳವಡಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು. ಒಂದು ವೇಳೆ ತಾವು ಮಾಡದಿದ್ದಲ್ಲಿ ಮುಂದಿನ ವರ್ಷದ ತಮ್ಮ ಶಾಸಕರ ಅನುದಾನದಲ್ಲಿ ತಾವೇ ನಿರ್ಮಿಸುವುದಾಗಿ ತಿಳಿಸಿದರು.
ಮುಂದಿನ ವರ್ಷದಲ್ಲಿ ನಗರದಲ್ಲಿ ೧೦ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು.
ನಗರಸಭೆಗೆ ಹೆಚ್ಚಿನ ಅನುದಾನ ಬರಬೇಕಾದರೆ ಅದಕ್ಕೆ ನಮ್ಮ ನಗರಸಭೆಯ ಆದಾಯ ತೋರಿಸಬೇಕಾಗುತ್ತದೆ. ಹಾಗಾಗಿ ತಾವೆಲ್ಲರೂ ಸಕಾಲದಲ್ಲಿ ನಗರಸಭೆಗೆ ಆದಾಯ ತರುವ ಬಾಡಿಗೆ, ಕಂದಾಯ, ನೀರಿನ ಬಿಲ್ ಮುಂತಾದವನ್ನು ಪಾವತಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಅಫ್ಸರ್‌ ಪಾಷ ಮಾತನಾಡಿ, ನಗರದಲ್ಲಿ ಕುಡಿಯುವ ನೀರು ಸೇರಿದಂತೆ ಸ್ವಚ್ಚತೆಯ ಬಗ್ಗೆ ಜನರಿಗಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಈ ಹಿಂದೆ ನಗರಸಭೆಯ ಪೌರ ಕಾರ್ಮಿಕರಿಗೆ ಸುಮಾರು ಆರು ತಿಂಗಳ ಸಂಬಳ ನೀಡಿರಲಿಲ್ಲ. ಇದೀಗ ತಾವು ಅಧಿಕಾರಕ್ಕೆ ಬಂದ ಮೇಲೆ ಪೌರ ಕಾರ್ಮಿಕರ ಸಂಬಳಗಳನ್ನು ಮಾಡಿಸಿದ್ದು ಮುಂದಿನ ಡಿಸೆಂಬರ್ ಒಳಗೆ ಎಲ್ಲರಿಗೂ ಸಂಬಳ ಮಾಡಲಾಗುತ್ತದೆ ಎಂದರು.
ನಗರಸಭೆ ಆಯುಕ್ತ ಎಚ್.ವಿ.ಹರೀಶ್, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್, ಸದಸ್ಯರಾದ ಜಬೀವುಲ್ಲಾ, ಮಾಜಿ ಸದಸ್ಯರಾದ ಕದಿರಿ ಯೂಸುಫ್, ಸೀನಪ್ಪ ಮತ್ತಿತರರು ಹಾಜರಿದ್ದರು.