ನಕಲಿ ವೈದ್ಯರ ಕ್ಲಿನಿಕ್ಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಮೇರೆಗೆ ನಗರದಲ್ಲಿ ಶುಕ್ರವಾರ ನಗರಸಭೆ ಆಯುಕ್ತ ಹರೀಶ್ ನೇತೃತ್ವದ ತಂಡ ಹಲವು ಕ್ಲಿನಿಕ್ಗಳ ಮೇಲೆ ಧಿಡೀರ್ ಧಾಳಿ ನಡೆಸಿದರು.
ಓ.ಟಿ ವೃತ್ತದ ವಂದನಾ ಕ್ಲಿನಿಕ್, ಸರಸ್ವತಿ ವಿದ್ಯಾಸಂಸ್ಥೆಯ ಪಕ್ಕದಲ್ಲಿರುವ ಮುಬಾರಕ್ ಕ್ಲಿನಿಕ್, ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಎ.ಎಸ್.ಕ್ಲಿನಿಕ್ಗೆ ಧಾಳಿ ನಡೆಸಿ ಸೂಕ್ತ ದಾಖಲೆಗಳ ಪತ್ರವಿಲ್ಲದಿರುವುದರಿಂದ ಮುಚ್ಚಿಸಲಾಯಿತು.
ತಾಲ್ಲೂಕಿನಲ್ಲಿ ಸುಮಾರು 49 ನಕಲಿ ಕ್ಲಿನಿಕ್ಗಳ ಪಟ್ಟಿಯನ್ನು ಜಿಲ್ಲಾ ವೈದ್ಯಕೀಯ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುಷ್ ಅಧಿಕಾರಿಗಳು ತಯಾರಿಸಿದ್ದು, ನಗರದ 21 ಕ್ಲಿನಿಕ್ಗಳು ಪಟ್ಟಿಯಲ್ಲಿವೆ. ಯಾವುದೇ ರಾಜ್ಯದಲ್ಲಿ ಪದವಿ ಪಡೆದಿದ್ದರೂ, ಕರ್ನಾಟಕದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕರ್ನಾಟಕ ಯುನಾನಿ ಮತ್ತು ಆಯುರ್ವೇದ ಮಂಡಳಿಯಲ್ಲಿ ಹೆಸರು ನೋಂದಾಯಿಸಿರಬೇಕು. ನಾವು ಹೋಗಿದ್ದ ಕ್ಲಿನಿಕ್ಗಳನ್ನು ಮೂಲ ಪ್ರಮಾಣ ಪತ್ರಗಳು ಇರಲಿಲ್ಲ. ಆದ ಕಾರಣ ಮುಚ್ಚಿಸಲಾಗಿದೆ ಎಂದು ನಗರಸಭೆ ಆಯುಕ್ತ ಹರೀಶ್ ತಿಳಿಸಿದರು.
ನಗರಸಭೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.