ದ್ವಿತೀಯ ಪಿಯುಸಿ ಯ ವಾರ್ಷಿಕ ಪರೀಕ್ಷೆಗಳು ಗುರುವಾರ ಆರಂಭವಾಗಿದ್ದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಲಾ ಒಂದೊಂದು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೧,೦೩೪ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಮಳ್ಳೂರು ಸಮೀಪದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ೪೩೧ ವಿದ್ಯಾರ್ಥಿಗಳು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ೫೮೩ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದರು.
ಮೊದಲ ದಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಾಸಾಯನ ಶಾಸ್ತ್ರ ವಿಷಯವನ್ನು ಎದುರಿಸಿದ್ದಾರೆ.
ಸರ್ಕಾರಿ ಪ್ರೌಢಶಾಲಾ ಕೇಂದ್ರದಲ್ಲಿ ೧೭ ಮಂದಿ ಹಾಗೂ ವಿವೇಕಾನಂದ ಕಾಲೇಜಿನ ಕೇಂದ್ರದಲ್ಲಿ ೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಇನ್ನುಳಿದಂತೆ ಎಲ್ಲರೂ ಹಾಜರಾಗಿ ತಮ್ಮ ಭವಿಷ್ಯದಲ್ಲಿ ಭದ್ರ ಬುನಾದಿ ಹಾಕಬಲ್ಲ ಪರೀಕ್ಷೆಯನ್ನು ಎದುರಿಸಿದರು.
ಬೆಳಗ್ಗೆ ೯ ಗಂಟೆಗೆ ಸರಿಯಾಗಿ ಆರಂಭವಾದ ಪರೀಕ್ಷೆ ಮದ್ಯಾಹ್ನ ೧೨.೧೫ಕ್ಕೆ ಮುಗಿಯಿತು. ಪರೀಕ್ಷೆಗೂ ಮುನ್ನ ೧೦ ನಿಮಿಷಗಳ ಮುನ್ನವಷ್ಟೆ ಪರೀಕ್ಷಾರ್ಥಿಗಳಿಗೆ ಪ್ರವೇಶ ನೀಡಲಾಯಿತು. ಸರಿಯಾಗಿ ೯ ಗಂಟೆಗೆ ಎರಡೂ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಯಿತು.
ಪದವಿ ಪೂರ್ವ ಪರೀಕ್ಷಾ ಮಂಡಳಿಯ ಸೂಚನೆಯಂತೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲೂ ಪರೀಕ್ಷಾರ್ಥಿಗಳಿಗೆಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತಲ್ಲದೆ ಶೌಚಾಲಯದ ವ್ಯವಸ್ಥೆಯೂ ಇತ್ತು.
ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರಾದ ಎಂ.ಆನಂದ್ ಹಾಗೂ ವಿವೇಕಾನಂದ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರಾದ ಚಂದ್ರಕುಮಾರ್ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದು ಎರಡೂ ಕೇಂದ್ರಗಳಲ್ಲೂ ತಲಾ ಒಬ್ಬೊಬ್ಬರು ಪ್ರಶ್ನೆ ಪತ್ರಿಕೆ ಪಾಲಕರು, ಉತ್ತರ ಪತ್ರಿಕೆ ಪಾಲಕರು, ಕಚೇರಿ ಅಧೀಕ್ಷಕರು ಕಾರ್ಯನಿರ್ವಹಿಸಿದರು. ಜತೆಗೆ ವಿವಿಧ ಅಧಿಕಾರಿಗಳ ಸಂಚಾರಿ ಜಾಗೃತ ದಳಗಳೂ ಸಹ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿದ್ದವು.
- Advertisement -
- Advertisement -
- Advertisement -
- Advertisement -