ಯುನೈಟೆಡ್ ಥಿಯೋಲಾಜಿಕಲ್ ಕಾಲೇಜು ಹಾಗೂ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಗಳಿಂದ ದೇಶದ್ರೋಹ ಚಟುವಟಿಕೆಗಳನ್ನು ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಆಗಸ್ಟ್ ೧೩ ರಂದು ಬೆಂಗಳೂರಿನ ಜೆ.ಪಿ.ನಗರದ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಎಂಬ ಎನ್.ಜೊ.ಓ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಲಾಗಿದೆ. ಸೇನೆಯು ಅಲ್ಲಿಯ ಮುಗ್ದರನ್ನು ಬಲಿತೆಗೆದುಕೊಳ್ಳುತ್ತಿದೆ, ಅಲ್ಲಿನ ಜನರ ಸ್ವಾತಂತ್ರ್ಯವನ್ನು ಕಿತ್ತುಗೊಳ್ಳಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿರುವುದನ್ನು ಅಭಾವಿಪ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅಲ್ಲಿನ ಜನರ ರಕ್ಷಣೆಗೆ ಸದಾ ಬದ್ಧವಾಗಿದೆ. ಪ್ರವಾಹ, ಭೂಕಂಪ ಸಂದರ್ಭಗಳಲ್ಲಿ ಸೇನೆಯ ಕಾರ್ಯ ಜನಮೆಚ್ಚುಗೆಗಳಿಸಿದೆ. ಕಳೆದ ಎರಡು ವರ್ಷಗಳಿಂದ ಕಣಿವೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇದು ಭಯೋತ್ಪಾದಕರಿಗೆ ಹಾಗೂ ಪ್ರತ್ಯೇಕತಾವಾದಿಗಳಿಗೆ ನುಂಗಲಾಗದ ತುತ್ತಾಗಿದೆ. ಹೇಗಾದರು ಮಾಡಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಈ ರೀತಿಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸಲಾಗುತ್ತಿದೆ. ಆ ಮೂಲಕ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡಿ ಸೈನಿಕ ವ್ಯವಸ್ಥೆಯ ವಿರುದ್ಧ ಭಾವನೆ ನಿರ್ಮಾಣ ಮಾಡುವುದು ಪ್ರತ್ಯೇಕತಾವಾದಿಗಳ ತಂತ್ರವಾಗಿದೆ ಎಂದು ಆರೋಪಿಸಿದರು.
ಸೈನ್ಯವನ್ನು ನಿಂದಿಸಿದ ದೇಶದ್ರೋಹಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸಂಸ್ಥೆ, ಕಾರ್ಯಕ್ರಮ ಆಯೋಜಕರು ಮತ್ತು ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸುವಂತೆ ಅಭಾವಿಪ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ತೀವ್ರವಾದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಭಾವಿಪ ತಾಲ್ಲೂಕು ಸಂಚಾಲಕ ನರೇಶ್, ಸಂಪತ್, ಅಶ್ವತ್ಥ್, ಯೋಗಾನಂದ, ಬೈರಾರೆಡ್ಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿ ಗ್ರೇಡ್ ೨ ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಮನವಿಯನ್ನು ಸಲ್ಲಿಸಿದರು.