ದೇಶದಲ್ಲಿ ಆಂತರಿಕವಾದ ಜ್ವಲಂತ ಸಮಸ್ಯೆಗಳನ್ನು ತೊಡೆದು ಹಾಕಲು ಯುವಜನತೆ ಹೆಚ್ಚು ಸಕ್ರಿಯರಾಗಬೇಕು. ಅತ್ಯಂತ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಹಾಗೂ ಯುವಶಕ್ತಿಯಿಂದ ಕೂಡಿರುವ ರಾಷ್ಟ್ರವಾದ ಭಾರತವನ್ನು ಎಲ್ಲಾ ದೇಶಗಳಿಗಿಂತಲೂ ಉನ್ನತ ಸ್ಥಿತಿಗೆ ಕರೆದೊಯ್ಯಬೇಕಾದಂತಹ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಅವುಗಳನ್ನು ಬುಡ ಸಮೇತವಾಗಿ ಕಿತ್ತೊಗೆಯಬೇಕಾದಂತಹ ಮಾನಸಿಕ ಧೈರ್ಯವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ, ಮತ್ತು ರಾಷ್ಟ್ರದ ಹಿರಿಮೆಯ ಬಗ್ಗೆ ತಿಳುವಳಿಕೆ ನೀಡಬೇಕು. ಸಂವಿಧಾನದ ಉದ್ದೇಶಗಳು, ರಚನೆ ಮಾಡಿದ ರೀತಿ, ಅದನ್ನು ಅನಸರಿಸಬೇಕಾದಂತಹ ಅನಿವಾರ್ಯತೆ ಕುರಿತು ಮಕ್ಕಳಿಗೆ ತಿಳಿಸಬೇಕು. ರಾಷ್ಟ್ರ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾಗಾಂಧೀಜಿ, ಸುಭಾಷ್‌ಚಂದ್ರಬೋಸ್, ಲಾಲ್‌ಬಹುದ್ದೂರ್ ಶಾಸ್ತ್ರೀ ಮುಂತಾದ ನಾಯಕರ ಆದರ್ಶವನ್ನು ತಿಳಿಸಿಕೊಡಬೇಕು ಎಂದರು.
ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈ ಮಾತನಾಡಿ, ಸ್ವಾತಂತ್ರ್ಯ ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸುವುದರ ಜೊತೆಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.
ಪ್ರಪಂಚದಲ್ಲಿ ಅತ್ಯುತ್ತಮವಾದ, ಸರ್ವಧರ್ಮಗಳಿಗೆ ಸಮಾನತೆಯನ್ನು ಸಾರುವಂತಹ ಸಂವಿಧಾನವನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ಸಹಬಾಳ್ವೆಯಿಂದ ಜೀವಿಸಲು ಅವಕಾಶವಿದ್ದರೂ ಕೂಡಾ ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಅಪೌಷ್ಟಿಕತೆ, ಹಾಗೂ ಭಯೋತ್ಪಾದನೆ ಕೃತ್ಯಗಳ ಭಯ ರಾಷ್ಟ್ರದ ಜನತೆಯನ್ನುಕಾಡುತ್ತಿರುವುದು ಶೋಚನೀಯವಾದ ಸಂಗತಿಯಾಗಿದೆ. ಎಲ್ಲಾ ಧರ್ಮಗಳ ಜನತೆಯಲ್ಲಿ ಮೇಲು ಕೀಳೆಂಬ ಭಾವನೆ ತೊಲಗಿ ಹೋಗಿ, ನಾವೆಲ್ಲರೂ ಭಾರತೀಯರು ಎನ್ನುವಂತಹ ಸದ್ಭಾವನೆ ಮೂಡಬೇಕು ಎಂದರು.
ಸಮಾರಂಭದಲ್ಲಿ ಪೊಲೀಸ್, ಗೃಹ ರಕ್ಷಕದಳ, ಆಶಾಕಿರಣ ಶಾಲೆಯ ಮಕ್ಕಳು ಸೇರಿದಂತೆ ಬಹುತೇಕ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕಾರ ನಡೆಯಿತು.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸರ್ಕಾರಿ ನೌಕರರಾದ ಸುಂದರಾಚಾರಿ, ಮತ್ತು ಟಿ.ಟಿ.ನರಸಿಂಹಪ್ಪ ಅವರನ್ನು ಸನ್ಮಾನಿಸಲಾಯಿತು. ಕಸಾಪ ತಾಲ್ಲೂಕು ಘಟಕದ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಶಾಲಾ ತಂಡಗಳಿಗೆ ಪುಸ್ತಕ, ಭಾರತ ಮಾತೆಯ ಚಿತ್ರಪಟ ಮತ್ತು ಪ್ರಶಸ್ತಿಪತ್ರವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೀಡಿದರು.
ಶಾಲಾ ಮಕ್ಕಳಿಂದ ದೇಶ ಭಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಇ.ಓ.ವೆಂಕಟೇಶ್, ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಮುನೇಗೌಡ, ಕೇಶವರೆಡ್ಡಿ, ವೆಂಕಟಸ್ವಾಮಿ, ಸಿ.ಪಿ.ಐ.ವೆಂಕಟೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಸಾಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -