ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತಿದ್ದ ಮಹಾನ್ ನಾಯಕ, ಭಾರತದ ಮಿಸ್ಸೈಲ್ ಮ್ಯಾನ್ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಎಂದು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಡಾ. ಅಬ್ದುಲ್ ಕಲಾಂ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಮಾಡುತ್ತಾ ಮಾತನಾಡಿದರು.
ಡಾ. ಅಬ್ದುಲ್ ಕಲಾಂ ಅವರು ಕರ್ಮಯೋಗಿ. ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಚಿಕ್ಕ ಮಕ್ಕಳಿಂದ ವಿಶ್ವವಿದ್ಯಾಲಯದ ಮಕ್ಕಳವರಗೆ ಅವರ ಮಟ್ಟಕ್ಕೆ ಅರ್ಥವಾಗುವ ರೀತಿಯಲ್ಲಿ ವೈಜ್ನಾನಿಕ ವಿಷಯಗಳ ಬಗ್ಗೆ, ಅವರ ಭವಿಷ್ಯ ರೂಪಿಸುವುದರ ಬಗ್ಗೆ ಕಲಾಂ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ನುಡಿ ಮತ್ತು ಬದುಕು ಪ್ರೇರಣಾದಾಯಕ ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಅನೂಷ, ಗೌತಮ ಕುಲಕರ್ಣಿ ಮತ್ತು ಸಹನಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಆಲೂರು ವೆಂಕಟರಾಯ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಎಂ.ಆರ್.ಗೋಪಿನಾಥ್ ಹಾಜರಿದ್ದರು.