ದೇವರ ದಾಸಿಮಯ್ಯ ಜಯಂತಿಯಂದು ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದೇವರ ದಾಸಿಮಯ್ಯ, ಭಗವಾನ್ ಮಹಾವೀರ ಮತ್ತು ಅಕ್ಕಮಹಾದೇವಿ ಜಯಂತಿಯನ್ನು ಆಚರಿಸುವ ಸಲುವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ವಿವಿಧ ಜಯಂತ್ಯುತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಮುದಾಯದ ಸಹಕಾರವಿದ್ದಲ್ಲಿ ಚೆನ್ನಾಗಿ ಆಚರಿಸಬಹುದು. ನೇಕಾರ ಸಮುದಾಯದಲ್ಲಿ ಆಯ್ದ ಮೂವರು ಹಿರಿಯರನ್ನು ಸಹ ಸನ್ಮಾನಿಸಲಾಗುವುದು. ದೇವರ ದಾಸಿಮಯ್ಯ ಜಯಂತಿಯನ್ನು ಮಾರ್ಚ್ 22 ರಂದು ಭಗವಾನ್ ಮಹಾವೀರ ಮತ್ತು ಅಕ್ಕಮಹಾದೇವಿ ಜಯಂತಿಯನ್ನು ಮಾರ್ಚ್ 31 ರಂದು ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ನಗರಸಭೆ ಆಯುಕ್ತ ಚಲಪತಿ, ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ, ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಮಣಿ ಹಾಜರಿದ್ದರು.