ತಾಲ್ಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಸಿ.ರಾದಪ್ಪ ಎಂಬುವರಿಗೆ ಸೇರಿದ ಟೊಮೆಟೋ ಬೆಳೆಗೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಳೆನಾಶಕ ಔಷಧಿಯನ್ನು ಸಿಂಪಡಿಸಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಸಿ.ರಾದಪ್ಪ ಅವರು ಒಂದೂವರೆ ಎಕರೆಯಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. ಹೂಗಳನ್ನು ಬಿಟ್ಟಿದ್ದು, ಫಸಲು ಬರುವ ಸಮಯದಲ್ಲಿ ದುಷ್ಕರ್ಮಿಗಳು ನಡೆಸಿರುವ ಕೃತ್ಯದಿಂದಾಗಿ ಬೆಳೆಯು ಸರ್ವನಾಶವಾಗಿದೆ.
‘ಇಪ್ಪತ್ತೆರಡು ವರ್ಷಗಳಿಂದ ಜಮೀನನ್ನು ನೀರಿಲ್ಲದೆ ಬೀಡುಬಿಟ್ಟಿದ್ದೆವು. ಮೂರು ತಿಂಗಳ ಹಿಂದಷ್ಟೆ ಕೊಳವೆ ಬಾವಿಯನ್ನು ಕೊರೆಸಿದ್ದು, ನೀರು ಸಿಕ್ಕಿತ್ತು. ಅದಕ್ಕಾಗಿ ಟೊಮೆಟೋ ಬೆಳೆ ಬೆಳೆದೆವು. ಉತ್ತಮ ಫಸಲನ್ನು ನಿರೀಕ್ಷಿಸಿದ್ದು, ಸುಮಾರು 10 ಲಕ್ಷ ರೂಗಳವರೆಗೂ ಆದಾಯವನ್ನು ನಿರೀಕ್ಷಿಸಿದ್ದೆವು. ನಮ್ಮ ಶ್ರಮ, ಕೊಳವೆ ಬಾವಿಗೆ ಮಾಡಿರುವ ಖರ್ಚು, ಟೊಮೆಟೋ ಬೆಳೆಗಾಗಿ ಮಾಡಿರುವ ಲಕ್ಷಗಟ್ಟಲೆ ಖರ್ಚು ಎಲ್ಲವೂ ಸರ್ವನಾಶವಾಗಿ ನಾವು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದೇವೆ. ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ತಾಲ್ಲೂಕು ಕಚೇರಿಯಲ್ಲೂ ದೂರು ನೀಡಲಿದ್ದೇವೆ. ಈ ದುಷ್ಕೃತ್ಯ ನಡೆಸಿದವರಿಗೆ ಶಿಕ್ಷೆ ಆಗಬೇಕು’ ಎಂದು ರೈತ ಎನ್.ಸಿ.ರಾದಪ್ಪ ತಿಳಿಸಿದರು.