ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಶುಕ್ರವಾರ ಅವಿಶ್ವಾಸ ಮಂಡನೆಯ ವೀಕ್ಷಣೆಗೆಂದು ಆಗಮಿಸಿದ್ದ ಉಪವಿಭಾಗಾಧಿಕಾರಿ ಶಾಂತಲಾ, ಅವಿಶ್ವಾಸ ಮಂಡಿಸುವ ಸದಸ್ಯರ ಗೈರುಹಾಜರಿಯಿಂದ ನೋಟೀಸನ್ನು ರದ್ದುಗೊಳಿಸಿ ವಾಪಸ್ ಹೋಗುವಂತಾಯಿತು.
ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಒಟ್ಟು 19 ಮಂದಿ ಸದಸ್ಯರಿದ್ದು, 12 ಮಂದಿ ಜೆಡಿಎಸ್ ಬೆಂಬಲಿತ ಹಾಗೂ 7 ಕಾಂಗ್ರೆಸ್ ಬೆಂಬಲಿಗರಿದ್ದರು. ಜೆಡಿಎಸ್ ಬೆಂಬಲಿತ ಡಾ.ಧನಂಜಯರೆಡ್ಡಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷ ಅವಧಿ ಇನ್ನೂ 11 ತಿಂಗಳಿತ್ತು. ಆದರೆ ಕಳೆದ ವಾರ 13 ಮಂದಿ ಸದಸ್ಯರು ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಅವಿಶ್ವಾಸವನ್ನು ಮಂಡಿಸಿದ್ದರು. ಆ ಕಾರಣದಿಂದ ದಿನಾಂಕವನ್ನು ನಿಗದಿಗೊಳಿಸಿ ಪಂಚಾಯತಿಗೆ ಆಗಮಿಸಿದ ಉಪವಿಭಾಗಾಧಿಕಾರಿ ಅವರು ಕೇವಲ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದುದರಿಂದ ರದ್ದುಗೊಳಿಸಿ ಹಿಂತಿರುಗಿದರು. ರಾಜಕೀಯ ಗಂಭೀರತೆಯಿಂದಾಗಿ ಒಂದೆಡೆ ಸಾರ್ವಜನಿಕರು ಕುತೂಹಲಗೊಂಡು ನೋಡುತ್ತಿದ್ದರೆ, ಮತ್ತೊಂದೆಡೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಿಂದ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.
’ಪಕ್ಷಾತೀತವಾದ, ಜಾತ್ಯಾತೀತವಾದ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸುತ್ತಿದ್ದೇನೆ. ಎಲ್ಲಾ ಸದಸ್ಯರಿಗೂ ಪಕ್ಷ ಬೇಧವಿಲ್ಲದೆ ಸಮಾನ ಹಕ್ಕು ಇರುವ ಪಂಚಾಯತಿ ನಮ್ಮದು. ಅವಿಶ್ವಾಸ ನಿಲುವಳಿ ಮಂಡನೆ ತಿರಸ್ಕೃತಗೊಂಡಿದೆ. ಈ ಜಯ ನಮ್ಮ ನೈತಿಕತೆಯನ್ನು ಹೆಚ್ಚಿಸಿದೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮಾಜಿ ನಿರ್ದೇಶಕ ರಾಮಲಿಂಗಾರೆಡ್ಡಿ, ಶಿವಣ್ಣ, ಚೌಡಪ್ಪ, ಅಶ್ವತ್ಥರೆಡ್ಡಿ, ಶ್ರೀನಿವಾಸರೆಡ್ಡಿ, ಉಪವಿಭಾಗಾಧಿಕಾರಿಕಚೇರಿಯ ಅಧಿಕಾರಿಗಳಾದ ರಾಥೋಡ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.