Home News ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮನೆ ಹಂಚಿಕೆ ಕಾನೂನು ಬಾಹಿರ

ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮನೆ ಹಂಚಿಕೆ ಕಾನೂನು ಬಾಹಿರ

0

ಸಾಮಾಜಿಕ ನ್ಯಾಯ ಹಾಗೂ ನಿಯಮಗಳನ್ನು ಮೀರಿ ಬಡವರ ಮನೆಗಳ ಹಂಚಿಕೆ ಮಾಡಿದ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಡವರ ವಿರೋಧಿಗಳು ಎಂದು ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಗೆ ಶಾಸಕರ ಮೂಲಕ ಬಸವ ವಸತಿ ಯೋಜನೆಯಡಿಯಲ್ಲಿ 31 ಮನೆಗಳು ಹಾಗೂ ಐಎವೈ ಯೋಜನೆಯಲ್ಲಿ 18 ಮನೆಗಳು ಮಂಜೂರಾಗಿದ್ದವು. ಜೆಡಿಎಸ್ ಬೆಂಬಲಿತ ಏಳು ಸದಸ್ಯರು 21 ಮನೆಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, 29 ಮನೆಗಳನ್ನು ತಮ್ಮ ಕ್ಷೇತ್ರದ ಬಡವರಿಗೆ ನೀಡಲು ಒಡಂಬಡಿಕೆಗೆ ಬಂದೆವು. ಆದರೆ ಗ್ರಾಮ ಪಂಚಾತಿಯ ಕಾಂಗ್ರೆಸ್ ಬೆಂಬಲಿತರು ಅನುಮೋದನೆ ಹಾಗೂ ಕಂಪ್ಯೂಟರ್ನಲ್ಲಿ ಸೇರಿಸುವ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿತರ 12 ಮನೆಗಳನ್ನು ಉಳಿಸಿ ತಾವುಗಳು 37 ಮನೆಗಳನ್ನು ತೆಗೆದುಕೊಂಡಿದ್ದಾರೆ. ಈ ಅನ್ಯಾಯದ ಬಗ್ಗೆ ನಾವು ಪ್ರಶ್ನಿಸಿದೆವು. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಸಮರ್ಪಕವಾಗಿ ನಡೆಯದ ಫಲಾನುಭವಿಗಳ ಆಯ್ಕೆಯನ್ನು ಪುನಃ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದೆವು ಎಂದರು.
ಫಲಾನುಭವಿಗಳ ಆಯ್ಕೆಗಾಗಿ ನಡೆಸಬೇಕಾದ ಗ್ರಾಮ ಸಭೆಯಲ್ಲಿ ಕೇವಲ ಅರ್ಜಿಗಳನ್ನು ಸ್ವೀಕರಿಸಿ ಗ್ರಾಮ ಸಭೆಯನ್ನು ಮುಕ್ತಾಯ ಮಾಡಿದ್ದರು. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಏಕಪಕ್ಷೀಯವಾಗಿ ಪಟ್ಟಿ ತಯಾರಿಸಿ ಗ್ರಾಮ ಪಂಚಾಯತಿಯ ಅನುಮೋದನೆ ನೀಡಿರುವುದು ಕಾನೂನು ಬಾಹಿರ. ವಸತಿ ರಹಿತ ಫಲಾನುಭವಿಗಳ ಪಟ್ಟಿ ಗ್ರಾಮ ಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಕಾನೂನು ಬಾಹಿರವಾಗಿ ತಯಾರಿಸಲಾದ ಪಟ್ಟಿಯನ್ನು ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಕರೆದಿದ್ದ ಸಭೆಯ ನಡಾವಳಿಯಲ್ಲಿ ಕಾನೂನು ಬಾಹಿರವಾಗಿ ಸೇರಿಸಿದ್ದಾರೆ. ಈ ಬಗ್ಗೆ ನಾವು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಾಸಕರಿಗೆ ಲಿಖಿತವಾಗಿ ದೂರು ನೀಡಿದ್ದೆವು. ಅವರು ಕ್ರಮ ಕೈಗೊಳ್ಳದ ಕಾರಣ ತಾಲ್ಲೂಕು ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದೆವು ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರದಿಂದ ಸಿಗುವ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಶಿಡ್ಲಘಟ್ಟ ಕ್ಷೇತ್ರ ಮೊದಲಸ್ಥಾನವನ್ನು ಪಡೆದಿದೆ. ಈ ಮಾನದಂಡವನ್ನು ಪರಿಗಣಿಸದೇ ಕ್ಷುಲ್ಲಕವಾಗಿ ಶಾಸಕರ ರಾಜೀನಾಮೆಗೆ ಒತ್ತಾಯಿಸಿರುವುದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ದಿಬ್ಬೂರಹಳ್ಳಿ ಪಂಚಾಯತಿಗೆ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾಗಿ ರಾಜು ಅವರ ಕೊಡುಗೆಯೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಶಾಸಕರಾದವರು ಸರ್ಕಾರ ಮಟ್ಟದಲ್ಲಿ ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ತರುತ್ತಾರೆ. ಆದರೆ ಪಕ್ಷದ ವಿವಿಧ ಮುಖಂಡರು ಸಾಮಾಜಿಕ ನ್ಯಾಯವನ್ನು ಮರೆತು ರಾಜಕೀಯ ಮಾಡುತ್ತಾರೆ. ಪಂಚಾಯತಿ ಮಟ್ಟದಲ್ಲಿ ನಡೆಯುವ ಅಸಮಾನತೆ, ಅನ್ಯಾಯಗಳನ್ನು ಸರಿಪಡಿಸದೇ ಶಾಸಕರನ್ನು ದೂರುವುದು ತರವಲ್ಲ ಎಂದು ಹೇಳಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್, ನರಸಿಂಹಪ್ಪ, ಮಧು, ವೇಣುಗೋಪಾಲ್, ಚಿಕ್ಕನರಸಿಂಹಪ್ಪ, ಟೈಲರ್ ಶಿವಣ್ಣ, ಶ್ರೀನಿವಾಸರೆಡ್ಡಿ, ಬಿ.ಸಿ.ಮಂಜುನಾಥ್, ಡಿ.ಜಿ.ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.