ಕೃಷಿ ಇಲಾಖೆಯ ಅಧಿಕಾರಿಗಳೇ ತಂದುಕೊಟ್ಟ ತೊಗರಿ ಮತ್ತು ಅಲಸಂಧಿ ಬಿತ್ತನೆ ಬೀಜಗಳನ್ನು ನಾಟಿ ಮಾಡಿದ್ದು, ಬೆಳೆ ಬರುವ ಸಮಯದಲ್ಲಿ ಬೆಳೆನಾಶವಾಗುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡಾ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಮಿತ್ತನಹಳ್ಳಿ, ಮತ್ತು ಸುಗಟೂರು ಗ್ರಾಮದ ಕೆಲ ರೈತರ ತೋಟಗಳಿಗೆ ಜಂಗಮಕೋಟೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬೆಂಗಳೂರಿನ ಜಿ.ಕೆ.ವಿ.ಕೆ.ಯಿಂದ ಬಿತ್ತನೆ ಬೀಜಗಳನ್ನು ತಂದುಕೊಟ್ಟಿದ್ದಾರೆ. ಬೀಜಗಳನ್ನು ಬಿತ್ತನೆ ಮಾಡಿ, ನೀರಿನ ಅಭಾವದಲ್ಲಿಯೂ ಟ್ಯಾಂಕರುಗಳ ಮೂಲಕ ನೀರು ಹಾಯಿಸಿ ಸಸಿಗಳನ್ನು ಕಾಪಾಡಿಕೊಂಡಿದ್ದೆವು, ಆದರೆ ಸಸಿಗಳು ಫಸಲು ಕೊಡುವ ಸಮಯದಲ್ಲಿ ಕಾಂಡಕ್ಕೆ ವಿಚಿತ್ರವಾದ ರೋಗ ಬಿದ್ದಿದೆ, ಇದರಿಂದ ತೊಗರಿಗಿಡಗಳು ಇದ್ದಕಿದ್ದಂತೆ ಮುರಿದು ಬೀಳುತ್ತಿವೆ, ಇದರ ಜೊತೆಗೆ ಅಲಸಂದಿ ಗಿಡಗಳು ಕೂಡಾ ರೋಗಕ್ಕೆ ಒಳಗಾಗಿದ್ದು, ಕಾಯಿಗಳನ್ನು ಬಿಡುತ್ತಿಲ್ಲ. ಇದರಿಂದ ಸಾವಿರಾರು ರೂಪಾಯಿಗಳು ನಷ್ಟವಾಗುತ್ತಿದೆ, ಸಂಬಂಧಪಟ್ಟ ಕೃಷಿ ಅಧಿಕಾರಿಯ ಗಮನಕ್ಕೆ ತಂದಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ, ಪರಿಶೀಲನೆ ನಡೆಸಿ, ರೋಗಕ್ಕೆ ತುತ್ತಾಗಿರುವ ಸಸಿಗಳ ಮಾದರಿಗಳನ್ನು ಸಂಗ್ರಹಿಸಿಕೊಂಡು ಪರೀಕ್ಷೆಗೆ ಒಳಪಡಿಸಲು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ರಾಸಾಯನಿಕ ಔಷಧಿಗಳ ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗೋಪಾಲರಾವ್, ರೈತರಾದ ಬಸವರಾಜ್, ಮುನಿಕೃಷ್ಣಪ್ಪ, ಮಿತ್ತನಹಳ್ಳಿ ಹರೀಶ್, ಹಿತ್ತಲಹಳ್ಳಿ ಸುರೇಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -