ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಮತದಾನದಿಂದ ದೂರವೇ ಉಳಿದಿದ್ದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಗಳೆ ಇಲ್ಲದ ಮತದಾನ ನೀರಸವಾಗಿ ನಡೆಯಿತು.
ತಾಲ್ಲೂಕಿನ ಐದು ಎಪಿಎಂಸಿ ಕ್ಷೇತ್ರಗಳಿಗೆ ಗುರುವಾರ ಬೆಳಗ್ಗೆ ೮ ಗಂಟೆಯಿಂದಲೆ ಮತದಾನ ಆರಂಭವಾಯಿತಾದರೂ ಚಳಿಯ ವಾತಾವರಣದಿಂದ ಬಿಸಿಲೇರುವ ತನಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಬಳಿ ಸುಳಿಯಲಿಲ್ಲ ವಾದ್ದರಿಂದ ಮತದಾನ ಪ್ರಕ್ರಿಯೆ ನೀರಸವಾಗಿತ್ತು.
ಬಿಸಿಲೇರುತ್ತಿದ್ದಂತೆ ಮತಗಟ್ಟೆ ಬಳಿ ಮತದಾರರು ಒಬ್ಬೊಬ್ಬರಾಗಿ ನಿಧಾನವಾಗಿ ಸುಳಿಯತೊಡಗಿದ್ದು ನಿಧಾನಗತಿಯಲ್ಲಿ ಮತದಾನ ನಡೆಯಿತು.
ಮತದಾನ ಆರಂಭವಾದ ಮೇಲೂ ಮತಗಟ್ಟೆಯ ಬಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ನಿಂತು ಮತದಾರರನ್ನು ಮನವೊಲಿಸುವ ಕೊನೆಯ ಕಸರತ್ತು ನಡೆಯಿತು. ಎಲೆ ಅಡಿಕೆ ತಾಂಬೂಲ ನೀಡಿ ನಮಗೆ ಮತ ನೀಡುವಂತೆ ಮತದಾರರ ಮನವೊಲಿಸಿದರು.
ಆದರೆ ಈ ಮೊದಲೆ ಪ್ರಕಟಿಸಿದಂತೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮತಗಟ್ಟೆ ಬಳಿ ಸುಳಿಯಲಿಲ್ಲ.
ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಯಾವುದೆ ಮತಗಟ್ಟೆಯಲ್ಲೂ ಏಜೆಂಟರೂ ಸಹ ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ ಜೆಡಿಎಸ್ ಪಕ್ಷದ ಮತದಾರರೂ ಎಲ್ಲೂ ಹೆಚ್ಚಾಗಿ ಕಾಣಲಿಲ್ಲ.
ಬಹುತೇಕ ಎಲ್ಲ ಮತಗಟ್ಟೆಗಳ ಬಳಿಯೂ ಚುನಾವಣೆಯ ಆತುರ ಕಾತುರ ಲಘು ಬಗೆ ಇಲ್ಲದೆ ನೀರಸವಾದ ವಾತಾವರಣ ಇತ್ತು.
ಶೇ. ೩೭ರಷ್ಟು ಮತದಾನ ನಡೆಯುವ ಮೂಲಕ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಅತಿ ಕಡಿಮೆ ಪ್ರಮಾಣದ ಮತದಾನಕ್ಕೆ ಈ ಎಪಿಎಂಸಿ ಚುನಾವಣೆ ಸಾಕ್ಷಿಯಾಯಿತು.
ಇನ್ನು ಸಂಸದ ಕೆ.ಎಚ್.ಮುನಿಯಪ್ಪ ಶಿಡ್ಲಘಟ್ಟ ಎಪಿಎಂಸಿ ಕ್ಷೇತ್ರದ ಮೇಲೂರು ಗ್ರಾಮದಲ್ಲಿ ಮತ ಚಲಾಯಿಸಿದರೆ ಮಾಜಿ ಸಚಿವ ವಿ.ಮುನಿಯಪ್ಪ ತಮ್ಮ ಪತ್ನಿಯೊಂದಿಗೆ ಹಂಡಿಗನಾಳ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಇನ್ನಿತರೆ ಪ್ರಮುಖರು ಮತಗಟ್ಟೆಯತ್ತ ಸುಳಿಯಲೇ ಇಲ್ಲ.