ಪ್ರತಿಯೊಂದು ಹಳ್ಳಿಗಳಲ್ಲಿರುವ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕಡೆಗೆ ನಾಗರಿಕರು ಹೆಚ್ಚಿನ ಒಲವು ತೋರಿಸಬೇಕು ಎಂದು ಯುವಶಕ್ತಿ ಸಂಘಟನೆಯ ವಿಜಯಭಾವರೆಡ್ಡಿ ಮನವಿ ಮಾಡಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೧೧ ನೇ ಮೈಲಿ ಕ್ರಾಸ್ನಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲಾವರಣದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಯಲು ಸೀಮೆಯ ಭಾಗವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯೂ ಸೇರಿದಂತೆ ಬರಗಾಲಪೀಡಿತ ಎಲ್ಲಾ ಪ್ರದೇಶಗಳಲ್ಲಿನ ಜನರು ಕಳೆದ ೪ ದಶಕಗಳಿಂದ ನಿರಂತರವಾಗಿ ನೀರಾವರಿ ಯೋಜನೆಗಳ ಅನುಷ್ಟಾನಕ್ಕಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳಾದ ಮರಗಿಡಗಳ ಮಾರಣಹೋಮ ಹಾಗೂ ಮರಳ ಸಾಗಾಣಿಕೆ ಹೆಚ್ಚಾದ ಪರಿಣಾಮ ಮಳೆಯ ಮಾರುತಗಳನ್ನು ಸೆಳೆದುಕೊಳ್ಳುವಂತೆ ಸಾಮರ್ಥ್ಯವಿಲ್ಲದ ಪರಿಸರದಲ್ಲಿ ವಾಸಿಸುವಂತಾಗಿದೆ. ಈಗಲಾದರೂ ಜನರು ಎಚ್ಚೆತ್ತುಕೊಂಡು ಗಿಡಮರಗಳನ್ನು ಬೆಳೆಸದಿದ್ದರೆ, ನೀರಿನ ಅಭಾವದೊಂದಿಗೆ ಮುಂದೊಂದು ದಿನ ಉಸಿರಾಡುವಂತಹ ಆಮ್ಲಜನಕ ಗಾಳಿಗಾಗಿ ಹೋರಾಟವನ್ನು ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಬಹುದಾಗಿದೆ, ಆದ್ದರಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಖಾಲಿಯಾಗಿರುವ ಸರ್ಕಾರಿ ಭೂಮಿಗಳು, ರೈತರುಗಳ ಜಮೀನಿನ ಬದುಗಳು ಸೇರಿದಂತೆ ಸಾಧ್ಯವಿರುವಷ್ಟು ಮರಗಿಡಗಳನ್ನು ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೈಯಪ್ಪನಹಳ್ಳಿ, ಕುದುಪಕುಂಟೆ, ನಲ್ಲೋಜನಹಳ್ಳಿ ಗ್ರಾಮಗಳಿಂದ ಬಂದಿದ್ದ ನಾಗರೀಕರು ೩೦೦ ಕ್ಕೂ ಅಧಿಕವಾದ ಸಸಿಗಳನ್ನು ನೆಟ್ಟು ನೀರೆರದರು.
ಪ್ರಾಂಶುಪಾಲ ನಾರಾಯಣಸ್ವಾಮಿ, ಶಿವಕುಮಾರ್, ಶಿವಪ್ರಕಾಶ್, ನಾಗರಾಜು, ಶ್ರೀರಾಮ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -