Home News ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

0

ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಸಕಾಲದಲ್ಲಿ ಮಾಡದೇ ಇರುವುದು ಸಹ ಭ್ರಷ್ಟಾಚಾರಕ್ಕೆ ಸಮಾನ ಎಂದು ಜಿಲ್ಲಾ ಪಂಚಾಯಿತಿ ಅದ್ಯಕ್ಷ ಎಚ್.ವಿ.ಮಂಜುನಾಥ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಕುಡಿಯುವ ನೀರು ಪೂರೈಸಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಿದ್ದರೂ ನಿರ್ವಹಣೆಯಿಲ್ಲದೇ ಬಹುತೇಕ ಘಟಕಗಳು ನಿಂತಿರುವ ಬಗ್ಗೆ ಮಾಹಿತಿ ಬಂದಿದೆ. ಜನತೆಗೆ ಕುಡಿಯುವ ನೀರು ಪೂರೈಸಲು ನಿರ್ಲಕ್ಷ್ಯ ತೋರಿದರೆ ಸಂಬಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಬಗ್ಗೆ ಕೂಡಲೇ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡಬೇಕು. ಇಲ್ಲವಾದಲ್ಲಿ ಆಯಾ ಪಂಚಾಯಿತಿ ಪಿಡಿಓಗಳನ್ನು ಹೊಣೆ ಮಾಡಲಾಗುವುದು ಎಂದರು.
ತಾಲ್ಲೂಕಿನ ಹಲವೆಡೆ ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡು ಬಂದಿದೆ. ಫ್ಲೋರೊಸಿಸ್ ಖಾಯಿಲೆ ತಡೆಗಟ್ಟಲು ನೆಲ್ಲಿಕಾಯಿ ಬಳಸಲು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು ಸಭೆಗೆ ಗೈರು ಹಾಜರಾಗಿರುವುದು ಮತ್ತು ಸಭೆಗೆ ಅಸಮರ್ಪಕ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ನೊಟೀಸ್ ಜಾರಿಗೊಳಿಸಿ ಎಂದು ಇಓ ವೆಂಕಟೇಶ್‌ರಿಗೆ ಅವರು ತಿಳಿಸಿದರು.
ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕೊಳವೆಬಾವಿಗಳಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಹಣ ಮಾಡುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಎಚ್.ವಿ.ಮಂಜುನಾಥ್ ಕೂಡಲೇ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಗ್ರಾಮ ವಿಕಾಸ್ ಯೋಜನೆಯಡಿ ತಾಲ್ಲೂಕಿನಾದ್ಯಂತ ಆಯ್ಕೆಯಾಗಿರುವ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಎರಡು ಬಾರಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾಮಗಾರಿ ಪರಿಶೀಲನೆ ನಡೆಸುವಾಗ ಎಚ್ಚರ ವಹಿಸಿ ಎಂದರು.
ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಅದುನಿಕ ತಂತ್ರಜ್ಞಾನದ ಮಾಹಿತಿಯನ್ನು ರೈತರಿಗೆ ಮುಟ್ಟಿಸುವಲ್ಲಿ ಕೃಷಿ ಅಧಿಕಾರಿಗಳು ಪ್ರಾಮಾಣಿಕ ಯತ್ನ ನಡೆಸಬೇಕು. ರೈತರಿಗೆ ಬೇಕಾದ ಅಗತ್ಯವಾದ ಉಪಕರಣಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅದನ್ನು ಜಿಲ್ಲಾ ಪಂಚಾಯಿತಿಯಿಂದ ಪೂರೈಸಲು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಈವರೆಗೂ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಹಾಜರಿದ್ದರು.