ತೋಟಗಾರಿಕಾ ಕ್ಷೇತ್ರದಲ್ಲಿ ಹಾಗೂ ಹವಾಮಾನದ ಕುರಿತಂತೆ ಶಿಡ್ಲಘಟ್ಟ ತಾಲ್ಲೂಕಿನ ರೈತರು ಹಾಗೂ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣವನ್ನು ನಡೆಸಿಕೊಡುವುದಾಗಿ ವಿಜ್ಞಾನಿ ಶ್ರೀನಿವಾಸರಾವ್ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಕಸಾಪ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಪ್ರಾಥಮಿಕ ಮತ್ತು ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬಾಲ್ಯದಲ್ಲಿ ನನ್ನ ಅರಿವನ್ನು ವಿಸ್ತರಿಸಿದ ಈ ತಾಲ್ಲೂಕಿನ ಜನರಿಗೆ ಉಪಯುಕ್ತವಾಗುವಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ಜ್ಞಾನವಂತರನ್ನು ಕರೆತಂದು ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ತಾಲ್ಲೂಕು ಕಸಾಪ ಮಾಡುತ್ತಿದ್ದು, ಅವರ ಕೆಲಸದಲ್ಲಿ ಕೈಜೋಡಿಸುವುದಾಗಿ ಹೇಳಿದರು.
ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಎನ್.ಕೃಷ್ಣಮೂರ್ತಿ ಅವರು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುವುದು ಬಹಳ ಕಷ್ಟ ಆದರೂ ಹಳ್ಳಿ ಮಕ್ಕಳು ಪ್ರತಿಭಾವಂತರಿದ್ದು ಅವರನ್ನು ಸಾಧಕರನ್ನಾಗಿಸುವ ಉದ್ದೇಶದಿಂದ ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವುದಾಗಿ ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ತಾಲ್ಲೂಕು ಕಸಾಪ ವತಿಯಿಂದ ಮಹಿಳೆಯರಿಗೆ, ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಯೋಧರು ಹಾಗೂ ವಿಜ್ಞಾನಿಗಳನ್ನು ಕರೆಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾದಾಯಕ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ವಿಜ್ಞಾನಿ ಶ್ರೀನಿವಾಸರಾವ್ ಮತ್ತು ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಎನ್.ಕೃಷ್ಣಮೂರ್ತಿ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸಂಚಾಲಕ ಲಕ್ಷ್ಮೀನಾರಾಯಣ್, ಗುರುರಾಜರಾವ್, ಬ್ಯಾಟರಾಯಸ್ವಾಮಿ ದೇವಾಲಯದ ಮುಖ್ಯಸ್ಥ ಬ್ಯಾಟರಾಯಶೆಟ್ಟಿ ಹಾಜರಿದ್ದರು.