ಜನರ ಆರೋಗ್ಯದ ಬಗ್ಗೆ ಗಮಹರಿಸುವುದರೊಂದಿಗೆ ಕಡಿಮೆ ಬೆಲೆಗೂ ಜನ ಸಾಮಾನ್ಯರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಈ ಭಾಗದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ನೂತನವಾಗಿ ನಿರ್ಮಿಸಲಾಗಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ. ಆದರೆ ಇತರೆ ಕಂಪೆನಿಗಳಿಗೆ ಲಾಭವೇ ಮುಖ್ಯ ಹೊರತು ಜನರ ಆರೋಗ್ಯವಲ್ಲ. ಹಾಗಾಗಿ ಅಂತಹ ಕಂಪೆನಿಗಳು ಬಗೆ ಬಗೆಯ ವಸ್ತುಗಳನ್ನು ತಯಾರಿಸಿ ಬಣ್ಣ ಬಣ್ಣದ ಪಾಕೇಟ್ಗಳಲ್ಲಿ ಮಾರಾಟ ಮಾಡುತ್ತಾರೆ. ಅದಕ್ಕೆ ಜನ ಬಹಳ ಬೇಗ ಮರುಳಾಗುತ್ತಾರೆ. ನಂದಿನಿ ಹಾಲಿನ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ರುಚಿ, ಶುಚಿಯಾಗಿಯೂ ಇರುತ್ತದೆಯಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ ನಂದಿನಿ ಉತ್ಪನ್ನಗಳ ಸೇವನೆ ಬಹಳ ಮುಖ್ಯ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಹಾಲು, ಮಜ್ಜಿಗೆ, ಮೊಸರು, ಪೇಡ, ಅಲ್ವಾ ಇನ್ನಿತರೆ ಉತ್ಪನ್ನಗಳು ಬಹಳ ಕಡಿಮೆ ಬೆಲೆಗೆ ಇಲ್ಲಿ ಸಿಗಲಿವೆ. ಇವುಗಳನ್ನು ಖರೀದಿಸುವುದರಿಂದ ನಾವು ಹೈನುಗಾರಿಕೆಯನ್ನು ಜತೆಗೆ ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಬೇರೆ ಬೇರೆ ಬ್ರಾಂಡ್ಗಳ ವಸ್ತುಗಳಿಗಿಂತಲೂ ನಂದಿನಿ ಬ್ರಾಂಡ್ನ ಉತ್ಪನ್ನಗಳು ಆರೋಗ್ಯ ಹಾಗೂ ಬೆಲೆ ದೃಷ್ಟಿಯಿಂದಲೂ ಉತ್ತಮವಾಗಿದ್ದು ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ, ಹಾಗು ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೆಎಂಎಫ್ನ ಅಧ್ಯಕ್ಷ ಪಿ.ನಾಗರಾಜ್, ವ್ಯವಸ್ಥಾಪಕ ನಿರ್ದೆಶಕ ಎ.ಎಸ್.ಪ್ರೇಮನಾಥ್, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಜೆ.ಕಾಂತರಾಜ್, ಕೋಚಿಮುಲ್ ನಿರ್ದೇಶಕರಾದ ಬಂಕ್ಮುನಿಯಪ್ಪ, ಆರ್.ಎ.ಉಮೇಶ್, ವೈ.ಬಿ.ಅಶ್ವತ್ಥನಾರಾಯಣ, ಕೆ.ವಿ.ನಾಗರಾಜ್, ಕೆ.ಅಶ್ವತ್ಥರೆಡ್ಡಿ. ಮಹಿಳಾ ನಿರ್ದೇಶಕಿ ಸುನಂದಮ್ಮ ಕೋಲಾರ ಜಿಲ್ಲಾ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೋಚಿಮುಲ್ ನಿರ್ವಾಹಕ ನಿರ್ದೇಶಕ ಡಾ.ಡಿ.ಟಿ.ಗೋಪಾಲ್, ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ರಘುನಂದನ್, ಸ್ಥಳೀಯ ಶಿಬಿರದ ವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ನಂದಿನಿ ಮಾರಾಟ ಮಳಿಗೆಯ ಮಾಲೀಕ ಎ.ಶಶಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -