ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಐದು ಕೋಟಿ ಮೂರು ಲಕ್ಷ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ಪುರಬೈರೇನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡದ ಸಮರ್ಪಣೆ, ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ, 45 ಲಕ್ಷ ರೂಗಳ ವೆಚ್ಚದ ಚಿಂತಾಮಣಿ ತಾಲ್ಲೂಕು ಏನಿಗದೆಲೆ ಗ್ರಾಮದ ಜವಾಹರ್ ನೆಹರೂ ವಿದ್ಯಾಪೀಠದ ಕಾಮಗಾರಿಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ನೆರವೇರಿಸಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಇದರಲ್ಲಿ ಹೆಚ್ಚಿ ಭಾಗವಿದೆ ಎಂದು ಅವರು ಹೇಳಿದರು.
ಶಾಶ್ವತ ನೀರು ಬರದಿದ್ದಲ್ಲಿ ನಮ್ಮ ಭಾಗದ ಜನರು ಗುಳೇ ಹೋಗಬೇಕಾದ ಪರಿಸ್ಥಿತಿಯಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದೇವೆ. ಜಿಲ್ಲೆಗೆ ನೀರು ಬರುವ ಯಾವ ಯೋಜನೆಯಾದರೂ ಮಾಡಲೇ ಬೇಕೆಂಬ ಒತ್ತಡ ಹೇರಲಾಗಿದೆ. ಎತ್ತಿನ ಹೊಳೆ ಅಥವಾ ಪರಮಶಿವಯ್ಯನವರ ಯೋಜನೆಯಾಗಲೀ ಜಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಪಟ್ಟಣದಲ್ಲಿ ಐದರಿಂದ ಆರು ಕೋಟಿ ರೂ ವೆಚ್ಚದಲ್ಲಿ ರಂಗಮಂದಿರ ಹಾಗೂ ಬಸ್ ಡಿಪೊಗಾಗಿ ಸ್ಥಳ ಪರಿಶೀಲನೆಗಳು ನಡೆದಿವೆ. ಎಲ್ಲರ ಸಹಕಾರವಿದ್ದಲ್ಲಿ ಶೀಘ್ರವಾಗಿ ಕಾಮಗಾರಿಗಳು ಪ್ರಾರಂಭವಾಗುತ್ತವೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೀಲಾ ಮಂಜುನಾಥ್, ಉಪವಿಭಾಗಾಧಿಕಾರಿ ಶಾಂತಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜೇಗೌಡ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಮುನಿಕೃಷ್ಣಪ್ಪ, ಪುರಸಭಾ ಸದಸ್ಯ ಅಫ್ಸರ್ ಪಾಷ, ಬ್ಯಾಟರಾಯಶೆಟ್ಟಿ, ಬಂಕ್ ಮುನಿಯಪ್ಪ, ಅಶ್ವತ್ಥನಾರಾಯಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -