Home News ತಾಲ್ಲೂಕಿನ ಏಳಿಗೆಗಾಗಿ ಶ್ರಮಿಸಿದ್ದ ಹಿರಿಯರು ಪ್ರೇರಣೆ

ತಾಲ್ಲೂಕಿನ ಏಳಿಗೆಗಾಗಿ ಶ್ರಮಿಸಿದ್ದ ಹಿರಿಯರು ಪ್ರೇರಣೆ

0

ವಿದ್ಯೆ, ಆರೋಗ್ಯ ಮತ್ತು ಆಹಾರದ ಕೊರತೆಯಿದ್ದ ಕಾಲದಲ್ಲಿ ತಾಲ್ಲೂಕಿನ ಏಳಿಗೆಗಾಗಿ ಶ್ರಮಿಸಿದ್ದ ಬಿ.ವಿರೂಪಾಕ್ಷಪ್ಪ ನೆನಪಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ.ಸಂದೀಪ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ಕನ್ನಡ ರತ್ನಕೋಶವನ್ನು ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.
ನಗರದ ಪ್ರಥಮ ಪುರಸಭಾ ಅಧ್ಯಕ್ಷ ಹಾಗೂ ಮೊಟ್ಟಮೊದಲ ಪ್ರೌಢಶಾಲೆ ಸ್ಥಳ ಮತ್ತು ಕಟ್ಟಡದ ದಾನಿಗಳಾದ ಬಿ.ವಿರೂಪಾಕ್ಷಪ್ಪ ಅವರ ನೆನಪಿನಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ. ವಿದ್ಯೆಗೆ ಅವರು ನೀಡಿದ ಕೊಡುಗೆ ಹಾಗೂ ಮೂಲ ಆಶಯಕ್ಕೆ ಬದ್ಧರಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ನೀಡುವ ಮೂಲಕ ಟ್ರಸ್ಟ್ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದಾಗಿ ಹೇಳಿದರು.
ಕನ್ನಡ ರತ್ನಕೋಶದಲ್ಲಿ ಪ್ರತಿದಿನ ಕನಿಷ್ಠ ಐದು ಪದಗಳನ್ನಾದರೂ ಕಲಿತರೆ ಮಕ್ಕಳ ಶಬ್ಧಬಂಡಾರ ಹೆಚ್ಚುತ್ತದೆ. ಕನ್ನಡ ಭಾಷೆಯ ಸೊಗಸು, ಲಾವಣ್ಯ, ಸೌಂದರ್ಯ ಅರಿಯುತ್ತಾ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಕೊಳ್ಳಬೇಕೆಂದು ನುಡಿದರು.
ಶಾಲೆಯ ಶಿಕ್ಷಕ ಎಲ್.ನಾಗಭೂಷಣ್ ಮಾತನಾಡಿ, ಸ್ವಾತಂತ್ರ್ಯ ಬರಲು ಎರಡು ತಿಂಗಳ ಮೊದಲು ಶಿಡ್ಲಘಟ್ಟದಲ್ಲಿ ಮೊದಲ ಪ್ರೌಢಶಾಲೆ ಪ್ರಾರಂಭವಾಯಿತು. ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ೧೩ ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಅದನ್ನು ದಾನ ಮಾಡಿದ ಬಿ.ವಿರೂಪಾಕ್ಷಪ್ಪ ಅವರು ಮೈಸೂರು ಮಹಾರಾಜರಿಂದ ಕಟ್ಟಡದ ಶಂಕುಸ್ಥಾಪನೆ ಮಾಡಿಸಿದ್ದರು. ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ಆಗ ಗೌರವಿಸಿದ್ದರು. ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಜೂನ್ ೫, ೧೯೫೪ರಂದು ನಗರದಲ್ಲಿ ವಿರೂಪಾಕ್ಷಪ್ಪ ಹೈಸ್ಕೂಲ್ ಕಟ್ಟಡವನ್ನು ಉದ್ಘಾಟಿಸಿದ್ದರು ಎಂದು ವಿವರಿಸಿದರು.
ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ. ಸಂದೀಪ್, ಖಜಾಂಚಿ ಸೌಮ್ಯ ಈ ಸಂದರ್ಭದಲ್ಲಿ ಹಾಜರಿದ್ದರು.