ಹಲವು ವರ್ಷಗಳ ಬಳಿಕ ತಾಲ್ಲೂಕಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಭಾನುವಾರ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಲಾಯಿತು. ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ತಾಲ್ಲೂಕಿನ ಜನರ ಪರವಾಗಿ ಮನವಿಪತ್ರ ನೀಡಿದ ಶಾಸಕ ಎಂ.ರಾಜಣ್ಣ ಅವರು ಜನರ ಆಶಯ ಈಡೇರಿಸುವಂತೆ ಕೋರಿದರು.
ಹುಟ್ಟೂರು ಎಂಬ ಅಭಿಮಾನದೊಂದಿಗೆ ತಾಲ್ಲೂಕಿನಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಬೃಹತ್ ಇನ್ಫೊಸಿಸ್ ಸಭಾಂಗಣ ಇಲ್ಲವೇ ಕಲಾಭವನ ನಿರ್ಮಿಸಬೇಕು. ತಾಲ್ಲೂಕಿನ ಜನರಿಗೆ ಉದ್ಯೋಗಾವಕಾಶ ಮತ್ತು ಮಾರ್ಗದರ್ಶನ ನೀಡಬಲ್ಲ ಉನ್ನತ ಮಟ್ಟದ ಇನ್ಫೊಸಿಸ್ ಕೌಶಲಾ್ಯಾಭಿವೃದ್ಧಿ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಇನ್ಫೊಸಿಸ್ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಆದಾಯ ಗಳಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.
ತಾಲ್ಲೂಕು, ಪಟ್ಟಣ ಇಲ್ಲವೇ ಪಂಚಾಯಿತಿಯೊಂದನ್ನು ದತ್ತು ತೆಗೆದುಕೊಂಡು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು. ಸ್ಫರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯದ ಪೀಳಿಗೆ ತಕ್ಕಮಟ್ಟದ ಪೈಪೋಟಿ ನೀಡುವ ರೀತಿಯಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡಬಲ್ಲ ಅಂತರ್ರಾಷ್ಟ್ರೀಯ ಮಟ್ಟದ ಶಾಲೆ ಆರಂಭಿಸಬೇಕು. ಇಲ್ಲಿನ ಜನರಿಗೆ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಬಲ್ಲ ಮತ್ತು ಚಿಕಿತ್ಸೆ ನೀಡಬಲ್ಲ ಅತ್ಯಾಧುನಿಕ ಮಾದರಿಯ ಆಸ್ಪತ್ರೆ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ಮನವಿಪತ್ರ ಸ್ವೀಕರಿಸಿದ ಎನ್.ಆರ್.ನಾರಾಯಣಮೂರ್ತಿ ಮಾತನಾಡಿ, ಬಾಯಿಯಿಂದ ಹೇಳುವುದಕ್ಕಿಂತ ಅದನ್ನು ಕಾರ್ಯಗತಗೊಳಿಸುವಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಾ ಮನವಿಗಳನ್ನು ಈಡೇರಿಸುತ್ತೇನೆಂದು ಈಗಲೇ ಭರವಸೆ ನೀಡುವುದಿಲ್ಲ. ಸುಳ್ಳು ಭರವಸೆ ನೀಡಲು ಇಚ್ಛಿಸುವುದಿಲ್ಲ. ನಿಮ್ಮ ಎಲ್ಲಾ ಮನವಿಗಳನ್ನು ಇನ್ಫೊಸಿಸ್ ಸಂಸ್ಥೆ ಮುಂದಿಡುತ್ತೇನೆ. ಸ್ಥಳೀಯ ಮಟ್ಟದಲ್ಲಿ ಯಾವುದೆಲ್ಲ ಸೌಕರ್ಯಗಳು ಲಭ್ಯ ಇವೆ ಎಂಬುದನ್ನು ಪರಿಶೀಲಿಸಿ ಅವರು ಕ್ರಮ ಕೈಗೊಳ್ಳುತ್ತರೆ ಎಂದರು. ಈ ಸಂದರ್ಭದಲ್ಲಿ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಡಾ. ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ವಿ.ಕೃಷ್ಣ ಉಪಸ್ಥಿತರಿದ್ದರು.
- Advertisement -
- Advertisement -
- Advertisement -
- Advertisement -