ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ಜುಲೂಸಿಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು. ಶಾಸಕ ಎಂ.ರಾಜಣ್ಣ, ಮೇಲೂರಿನ ಕೆ.ಸೂರ್ಯನಾರಾಯಣಗೌಡ, ಪುರಸಭೆ ಸದಸ್ಯ ಎನ್.ಲಕ್ಷ್ಮಣ, ಎನ್.ಸುರೇಶ್, ಎ.ವಿ.ಶ್ರೀನಾಥ್, ಎಲ್.ಮಂಜುನಾಥ್, ಎಸ್.ಎಂ.ರಮೇಶ್ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.
- Advertisement -
- Advertisement -
- Advertisement -
- Advertisement -