ದೇಶದಲ್ಲಿ ಇನ್ನೂ ಸಾಕಷ್ಟು ಮಂದಿ ಬ್ಯಾಂಕ್ ಸಂಪರ್ಕಕ್ಕೆ ಬಾರದವರು ಇದ್ದಾರೆ. ಪ್ರತಿಯೊಬ್ಬರನ್ನು ಕೂಡ ಬ್ಯಾಂಕ್‌ನ ಜಾಲಕ್ಕೆ ತರುವುದು ಸರ್ಕಾರದ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಉದ್ದೇಶವಾಗಿದ್ದು ಪ್ರತಿ ಕುಟುಂಬದ ಪ್ರತಿಯೊಬ್ಬರು ಕೂಡ ತಮ್ಮ ಸೇವಾ ವ್ಯಾಪ್ತಿಯ ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಖಾತೆಯನ್ನು ತೆರೆಯವುಂತೆ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಸ್.ಪಾವಟಿ ಮನವಿ ಮಾಡಿದರು.
ಶಿಡ್ಲಘಟ್ಟದ ಕೆನರಾ ಬ್ಯಾಂಕ್ ಶಾಖೆ, ಟಿಪ್ಪು ವೆಲ್‌ಫೇರ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕೆನರಾ ರೈತ ಸಂಪರ್ಕ ಅಭಿಯಾನ ಹಾಗೂ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳು, ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುವುದರಿಂದ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಖಾತೆ ಇಲ್ಲದಿದ್ದರೆ ಸವಲತ್ತಿನಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.
ದೇಶದ ಉದ್ದಗಲಕ್ಕೂ ಸುಮಾರು ೬ ಲಕ್ಷ ಹಳ್ಳಿಗಳಿದ್ದು ಪ್ರತಿ ಹಳ್ಳಿಗೂ ತೆರಳಿ ಬ್ಯಾಂಕ್‌ನ ಸವಲತ್ತುಗಳ ಬಗ್ಗೆ ವಿವರಿಸಿ, ಪ್ರತಿಯೊಬ್ಬರಿಗೂ ವೈಯಕ್ತಿಕ ಬ್ಯಾಂಕ್ ಖಾತೆಯ ಅಗತ್ಯತೆ, ಅನಿವಾರ್ಯತೆ ಕುರಿತು ಮಾಹಿತಿ ನೀಡುವ ಜತೆಗೆ ಆರ್ಥಿಕ ಸಾಕ್ಷರತೆಯನ್ನು ನೀಡುವ ಕೆಲಸ ಬ್ಯಾಂಕ್‌ನಿಂದ ನಡೆಯುತ್ತಿದೆ. ಅದಕ್ಕಾಗಿ ಬ್ಯಾಂಕ್ ಜೂನ್ ೧ರಿಂದ ಸೆಪ್ಟೆಂಬರ್‌೩೦ರವರೆಗೂ ೪ ತಿಂಗಳ ಕಾಲ ಕೆನರಾ ರೈತ ಸಂಪರ್ಕ ಅಭಿಯಾನ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಿದ್ದು ನಾವು ನಮ್ಮ ವ್ಯಾಪ್ತಿಯಲ್ಲಿನ ಎಲ್ಲ ಹಳ್ಳಿಗಳಿಗೂ ತೆರಳಿ ಕಾರ್ಯಕ್ರಮದ ಉದ್ದೇಶವನ್ನು ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ವಿವರಿಸಿದರು.
ಶೂನ್ಯ ಮೊತ್ತದ ಖಾತೆ ತೆರೆಯುವುದು ಸೇರಿದಂತೆ ಬ್ಯಾಂಕ್‌ನಿಂದ ಎಲ್ಲ ವರ್ಗಗಳ ಜನರಿಗೂ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಅವರು ಮಾಹಿತಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೆನರಾ ಬ್ಯಾಂಕ್‌ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಗಿರೀಶ್, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಬಲಂಕರ್, ಟಿಪ್ಪು ವೆಲ್‌ಫೇರ್ ಸಂಸ್ಥೆಯ ಮುಸ್ತಾಕ್ ಅಹ್ಮದ್, ಮಮತ, ಕೆನರಾ ಬ್ಯಾಂಕ್‌ನ ಶಿವು, ಅಶೋಕ್, ಗ್ರಾಮದ ಮುಖಂಡರಾದ ರಾಮಚಂದ್ರಪ್ಪ, ಶಂಕರಪ್ಪ, ಬಚ್ಚೇಗೌಡ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ತಲದುಮ್ಮನಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ರೈತರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.