Home News ತಲಕಾಯಲಬೆಟ್ಟದಲ್ಲಿ ಬ್ರಹ್ಮರಥೋತ್ಸವ

ತಲಕಾಯಲಬೆಟ್ಟದಲ್ಲಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥದ ಹಗ್ಗ ಹಿಡಿದೆಳೆದ ಭಕ್ತರು ನಮೋ ನಮೋ ಎಂದು ದೇವರ ಸ್ಮರಣೆ ಮಾಡಿದರಲ್ಲದೆ ದವನದೊಂದಿಗೆ ಬಾಳೆ ಹಣ್ಣನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.