ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನವಾಗಿದ್ದು, ಅಪಮಾನವೆಸಗಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದಸಂಸ ಪದಾಧಿಕಾರಿಗಳು, ಕಳೆದ ಶುಕ್ರವಾರದಂದು ಗ್ರಾಮಪಂಚಾಯತಿ ಕಾರ್ಯಾಲಯದಲ್ಲಿ ಹಾಕಿದ್ದ ಭಾವಚಿತ್ರಗಳಲ್ಲಿ ಅಂಬೇಡ್ಕರ್ಅವರ ಭಾವಚಿತ್ರವನ್ನು ಎಲ್ಲಾ ಭಾವಚಿತ್ರಗಳಿಗಿಂತಲೂ ತೀರಾ ಕೆಳಮಟ್ಟಕ್ಕೆ ಇಳಿಸಿ ಅಪಮಾನವೆಸಗಿದ್ದಾರೆ, ಈ ಬಗ್ಗೆ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ, ನನಗೆ ಗೊತ್ತಿಲ್ಲವೆಂದು ಉದ್ದಟತನವಾಗಿ ಮಾತನಾಡಿದರು. ಪಂಚಾಯತಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನೂ ಕೂಡಾ ಮೂಲೆಗುಂಪು ಮಾಡಲಾಗಿದೆ,
ಸಂವಿಧಾನ ಶಿಲ್ಪಿ ಅಂಬೇಡ್ಕರ್, ಹಾಗೂ ಸಮಾಜಚಿಂತಕ ಬಸವಣ್ಣನವರ ಭಾವಚಿತ್ರಗಳಿಗೆ ಅಪಮಾನವೆಸಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಿ, ಈ ಕೃತ್ಯದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸ್ಥಳಕ್ಕೆ ಬೇಟಿ ನೀಡಿದ್ದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ, ದಲಿತ ಮುಖಂಡರಿಂದ ಮನವಿಯನ್ನು ಸ್ವೀಕರಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವೆಸಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪೆಸಗಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ದ.ಸಂ.ಸ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ, ತಾಲ್ಲೂಕು ಸಂಚಾಲಕರಾದ ಎನ್.ಎ.ವೆಂಕಟೇಶ್, ಹುಜುಗೂರು ವೆಂಕಟೇಶ್, ಲಕ್ಷ್ಮೀನಾರಾಯಣ, ಚನ್ನಕೇಶವ, ಮುನಿಕೃಷ್ಣಪ್ಪ, ಡಿ.ಎಂ.ವೆಂಕಟೇಶ್, ಲಕ್ಕೇನಹಳ್ಳಿ ವೆಂಕಟೇಶ್, ತುಮ್ಮನಹಳ್ಳಿ ಮುನಿರಾಜು, ನರಸಿಂಹಯ್ಯ, ಶ್ರೀರಾಮಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.