Home News ಟಿಪ್ಪುಸುಲ್ತಾನ್ ಜಯಂತಿ

ಟಿಪ್ಪುಸುಲ್ತಾನ್ ಜಯಂತಿ

0

ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ನವೆಂಬರ್ 10 ರಂದು ತಾಲ್ಲೂಕು ಆಡಳಿತ ಹಾಗು ಸಮುದಾಯದ ಸಹಕಾರದೊಂದಿಗೆ ನಗರದ ತಾಲೂಕು ಕಛೇರಿ ಮುಂಭಾಗದಲ್ಲಿ ಸರ್ಕಾರದ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ಆಚರಿಸಲು ನಿರ್ಧರಿಸಲಾಯಿತು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ ತಹಸೀಲ್ದಾರ್ ಕೆ.ಎಂ. ಮನೋರಮಾ ಮಾತನಾಡಿ ಈ ಭಾರಿಯ ಟಿಪ್ಪುಸುಲ್ತಾನ್ ಜಯಂತಿಯನ್ನು ಸರ್ಕಾರದ ನಿರ್ದೇಶನದಂತೆ ಆಚರಿಸಲು ಸಮುದಾಯದ ಮುಖಂಡರು ಹಾಗು ನಾಗರೀಕರು ಹೆಚ್ಚಿನ ಸಹಕಾರ ನೀಡಬೇಕು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಲಾಗುವ ಬೇರೆ ಜಯಂತಿಗಳಂತೆಯೇ ಟಿಪ್ಪು ಜಯಂತಿಯನ್ನು ಆಚರಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಟಿಪ್ಪುಜಯಂತಿ ಅಂಗವಾಗಿ ಯಾವುದೇ ಬೈಕ್ ರ್ಯಾಲಿ, ಮೆರವಣಿಗೆ ನಡೆಸುವುದಕ್ಕೆ ಅವಕಾಶಗಳಿರುವುದಿಲ್ಲ, ಬದಲಿಗೆ ತಾಲೂಕು ಕಚೇರಿ ಮುಂಭಾಗದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಲಾಗುವ ಕಾರ್ಯಕ್ರಮದಲ್ಲಿ ಸಮುದಾಯದವರು ಭಾಗವಹಿಸಬಹುದು ಎಂದು ನಗರಠಾಣೆ ಪಿಎಸ್ಸೈ ನವೀನ್ ತಿಳಿಸಿದರು.
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಟಿಪ್ಪುಸುಲ್ತಾನ್ ಅವರ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು ಎಂದು ಸಮುದಾಯದ ಕೆಲ ಯುವಕರು ಒತ್ತಾಯಿಸಿದ್ದರಿಂದ ಈ ಬಗ್ಗೆ ಸರ್ಕಾರದ ಸೂಚನೆಯ ಮೇರೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ನಗರಠಾಣೆಯ ಪಿಎಸೈ ನವೀನ್, ಗ್ರಾಮಾಂತರ ಠಾಣೆಯ ಪಿಎಸೈ ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆ ಪಿಎಸೈ ಆರ್. ವಿಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಗೌಡ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಟಿಪ್ಪುಸುಲ್ತಾನ್ ಜಯಂತಿ ಆಚರಿಸುವ ಕುರಿತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪೂರ್ವ ಭಾವಿ ಸಭೆಯನ್ನು ನ 07 ರ ಸೋಮವಾರದಂದು ನಿಗದಿಪಡಿಸಲಾಗಿತ್ತು.
ಆದರೆ ಇಂದು ತರಾತುರಿಯಲ್ಲಿ ಕೆಲವರಿಗೆ ದೂರವಾಣಿ ಮೂಲಕ ಆಹ್ವಾನ ನೀಡಿ ಸಭೆ ಕರೆದ ತಹಸೀಲ್ದಾರರು ಸಭೆಯ ನಡುವೆ ಜಿಲ್ಲಾಧಿಕಾರಿಗಳು ಬಂದಿದ್ದಾರೆ ಎಂದು ಹೇಳಿ ತಮ್ಮ ಕೊಠಡಿಗೆ ಹೋಗಿ ಕುಳಿತರು.
ಸಭೆಯಿಂದ ಅರ್ಧದಲ್ಲಿ ಎದ್ದು ಹೋದ ತಹಸೀಲ್ದಾರರು ಸುಮಾರು 20 ನಿಮಿಷವಾದರೂ ಪೂರ್ವಭಾವಿ ಸಭೆಗೆ ಬಾರದ ಕ್ರಮ ಖಂಡಿಸಿ ಸಮುದಾಯದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡರನ್ನು ಸಮಾಧಾನಗೊಳಿಸಿದ ಪಿಎಸ್ಸೈ ನವೀನ್ ತೆರಳಿ ತಹಸೀಲ್ದಾರರನ್ನು ಸಭೆಗೆ ಕರೆದುಕೊಂಡು ಬಂದರು.