ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸಿ, ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿ ಜೆಡಿಎಸ್ ಮಹಾ ಅಧಿವೇಶನ ಆಯೋಜಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ಜೆಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಿರುವುದಾಗಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ತಾದೂರು ಗ್ರಾಮದಿಂದ ಐವತ್ತಕ್ಕೂ ಹೆಚ್ಚು ಸಂಖ್ಯೆಯ ಬಸ್ ಗಳಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ಜೆಡಿಎಸ್ ಮಹಾ ಅಧಿವೇಶನಕ್ಕೆ ಬುಧವಾರ ತೆರಳಿದ ಕಾರ್ಯಕರ್ತರಿಗೆ ಶುಭ ಕೋರಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆಯಬಲ್ಲ ಪ್ರಮುಖ ಪ್ರತಿಪಕ್ಷ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರು ಬೇರುಮಟ್ಟದಿಂದ ಜೆಡಿಎಸ್ ಸದೃಢಗೊಳಿಸುತ್ತಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ದೇವೇಗೌಡರ ಮಾರ್ಗದರ್ಶನದಂತೆ ಚುನಾವಣೆಯನ್ನು ಎದುರಿಸಲು ಸಿದ್ಧವಿದ್ದಾರೆ. ಪಕ್ಷದ ಗೆಲುವಿಗೆ ಶ್ರಮಿಸುವ ಕಾರ್ಯಕರ್ತರ ಪಡೆ ಅಪಾರ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗುತ್ತಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಪರವಾಗಿ ಶ್ರಮಿಸುತ್ತಿದ್ದಾರೆ. ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಅನೇಕ ರೈತ ಪರ, ಶ್ರಮಿಕರ ಪರ, ಮಹಿಳೆಯರ ಪರವಾದ ಯೋಜನೆಗಳನ್ನು ಸಹ ಹಮ್ಮಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಕೆಲವೊಂದು ನಿರ್ಣಯ ಕೈಗೊಳ್ಳಲಾಗುತ್ತದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಕ್ರಿಯವಾಗಿದೆ. ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್, ಪಕ್ಷದ ಕಾರ್ಯಕರ್ತರ ಬೆನ್ನೆಲುಬಾಗಿದ್ದಾರೆ. ಅಭಿವೃದ್ಧಿಯ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ಹುಜಗೂರು ರಾಮಣ್ಣ, ಆದಿಲ್, ಲಕ್ಷ್ಮಿನಾರಾಯಣ, ತಾದೂರು ರಘು, ರಾಜಶೇಖರ್, ಧರ್ಮೇಂದ್ರ, ಆರ್.ಎ.ಉಮೇಶ್, ಯೂಸುಫ್, ನಯಾಜ್, ಸುಹೇಲ್, ಅಮೀರ್ ಜಾನ್, ಶ್ರೀನಿವಾಸಗೌಡ ಹಾಜರಿದ್ದರು.