ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸರಿಸಮಾನವಾಗಿ ವೇತನ ಭತ್ಯೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘವು, ಜೂನ್ ೨ ರಂದು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಿಯಾಗುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗುರುವಾರ ಉಪನಿರ್ದೇಶಕರ ಕಛೇರಿಯಲ್ಲಿ ಮಾತನಾಡಿದ ಅವರು, ನೆರೆಯ ತೆಲಂಗಾಣ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವಂತೆ ವೇತನ ಭತ್ಯೆಯನ್ನು ನೀಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಮೈಸೂರಿನ ಸಮಾವೇಶದಲ್ಲಿ ಮತನಾಡಿದ್ದ ಮುಖ್ಯಮಂತ್ರಿಗಳು, ಈ ವಿಚಾರವನ್ನು ಪರಿಗಣಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಪರಿಗಣಿಸಿಲ್ಲ, ಕೇಂದ್ರ ಸರ್ಕಾರದ ೭ ನೇ ಆಯೋಗವು ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿ, ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಕನಿಷ್ಟ ೨೩.೫೫ ರಷ್ಟು ಹೆಚ್ಚಳವನ್ನು ಮಾಡಲು ಶಿಫಾರಸ್ಸು ಮಾಡಿರುತ್ತದೆ. ಆದರೆ ಸರ್ಕಾರಿ ನೌಕರರ ಸಂಘಟನೆಗಳು ೭ ನೇ ವೇತನ ಆಯೋಗವು ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಕೈಗೊಂಡ ಮಾನದಂಡ ಅವೈಜ್ಞಾನಿಕವಾಗಿ ಕೂಡಿದ್ದು, ನೌಕರರಿಗೆ ಅನ್ಯಾಯವಾಗಿರುವುದರಿಂದ ಎಲ್ಲಾ ನೌಕರರು ಜೂನ್ ೨ ರಂದು ಗೈರುಹಾಜರಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮಾತನಾಡಿ, ಜೂನ್ ೨ ರಂದು ಸರ್ಕಾರಿ ನೌಕರರ ಸಂಘದ ವತಿಯಿಂದ ಕರೆ ನೀಡಿರುವ ಸಾಮೂಹಿಕ ಗೈರುಹಾಜರಿಗೆ ಮಾರುಕಟ್ಟೆಯ ಅಧಿಕಾರಿಗಳು ಸಹಕಾರ ನೀಡುತ್ತಿರುವುದರಿಂದ ಅಂದು ರೈತರು ಗೂಡನ್ನು ತರದಂತೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಅಕ್ಕಲರೆಡ್ಡಿ. ಎಸ್.ಎಂ, ಖಜಾಂಚಿ ಆರ್. ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಗೌರವ ಅಧ್ಯಕ್ಷ ಸಿ.ಎಂ.ಮುನಿರಾಜು, ಶ್ರೀರಾಮಯ್ಯ, ನರೇಂದ್ರಬಾಬು, ಲಲಿತಮ್ಮ, ಪದ್ಮಾವತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.