Home News ಜೂಟ್ ಮಾಫಿಯಾಗೆ ಕಡಿವಾಣ ಹಾಕಲು ಕೋರಿ ರೀಲರುಗಳ ಧರಣಿ

ಜೂಟ್ ಮಾಫಿಯಾಗೆ ಕಡಿವಾಣ ಹಾಕಲು ಕೋರಿ ರೀಲರುಗಳ ಧರಣಿ

0

ಸಿಲ್ಕ್ವೇಸ್ಟ್ (ಜೊಟ್) ಖರೀದಿ ಮಾಡಲು ಬಂದಿದ್ದ ವರ್ತಕನೊಬ್ಬನನ್ನು ಗುಂಪುಂದು ಥಳಿಸಿ ಜೊಟ್ ಖರೀದಿಸಿಲಾಗಿದ್ದ ಜೊಟ್ ಕಸಿದುಕೊಂಡ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ರೇಷ್ಮೆ ನೂಲು ಬಿಚ್ಚಾಣಿಕೆದಾರರು ನಗರದಲ್ಲಿ ನಡೆಯುತ್ತಿರುವ ಜೂಟ್ ಮಾಫಿಯಾಗೆ ಕಡಿವಾಣ ಹಾಕಬೇಕೆಂದು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ನಿವಾಸಿ ಮನ್ಸೂರ್ ಎಂಬಾತನನ್ನು ಜೊಟ್ ಉದ್ಯಮಿಗಳು ಥಳಿಸಿದ್ದು ಜೋಟ್ ಮುಕ್ತ ಖರೀದಿಗೆ ಅವಕಾಶ ಮಾಡಿಕೊಡಬೇಕೆಂದು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
ಘಟನೆಯ ವಿವರ: ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟದಲ್ಲಿ ಉತ್ಪಾದನೆಯಾಗುವ ಜೊಟ್ ಖರೀದಿ ಮಾಡಲು ಗುಂಪೂಂದು ಸ್ವಯಂ ಘೋಷಿತ ದರವನ್ನು ನಿಗದಿಪಡಿಸಿ ಖರೀದಿ ಮಾಡುತ್ತಿದ್ದರೆನ್ನಲಾಗಿದೆ. ವಿಜಯಪುರದ ಮನ್ಸೂರ್ ಎಂಬಾತ ಕೆ.ಜಿ ಜೊಟ್ಗೆ ೫೨೦–-೫೫೦ ರೂಗಳಿಗೆ ಖರೀದಿ ಮಾಡುತ್ತಿದ್ದ ವೇಳೆಯಲ್ಲಿ ಕೆಲವರು ತಡೆದು ನಾವು ರೇಷ್ಮೆ ವ್ಯಾಪಾರ ಮಾಡುವ ರೀಲರ್ಗಳಿಗೆ ಸಾವಿರಾರು ರೂಗಳು ಠೇವಣಿ ನೀಡಿದ್ದು ನೀನು(ಮನ್ಸೂರ್) ಇಲ್ಲಿ ಬಂದು ವ್ಯಾಪಾರ ಕೆಡಿಸುತ್ತಿದ್ದೀಯಾ ನೀನು ಬೇಕಾದರೂ ೪೦೦–-೪೫೦ ರೂಗಳಿಗೆ ಖರೀದಿ ಮಾಡು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿ ಆತ ರೀಲರುಗಳಿಂದ ಖರೀದಿ ಮಾಡಿದ್ದ ಸುಮಾರು ೧೦೦ ಕೆ.ಜಿ ಜೊಟ್ನ್ನು ಕಸಿದುಕೊಂಡು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ವರ್ತಕನ ರಕ್ಷಣೆಗೆ ಧಾವಿಸಿದ ರೀಲರುಗಳು ಮತ್ತು ರೈತರು: ವಾತಾವರಣದ ಏರುಪೇರು ಮತ್ತು ಬೆಲೆ ಕುಸಿತದಿಂದ ಈಗಾಗಲೇ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಂಗಾಲಾಗಿದ್ದಾರೆ. ನಾಲ್ಕು- ಐದು ಮಂದಿ ಅಕ್ರಮವಾಗಿ ಕೂಟವನ್ನು ರಚಿಸಿಕೊಂಡು ಸ್ವಯಂಘೋಷಿತ ದರವನ್ನು ನಿಗಧಿಗೊಳಿಸಿ ಜೋಟ್ ಖರೀದಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೈತರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೆಗೌಡ, ಸಂಘಟನಾ ಸಂಚಾಲಕ ಮಳ್ಳೂರು ಹರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಬ್ಲೂಡು ದೇವರಾಜ್, ರೀಲರುಗಳಾದ ಮೊಹ್ಮದ್ ಅನ್ವರ್, ಅಕ್ಮಲ್, ನಗರಸಭೆಯ ಸದಸ್ಯ ಅಬ್ದುಲ್ ಗಫೂರ್, ನಾಗನರಸಿಂಹ, ಮುನಿಕೃಷ್ಣ, ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.