ಜಿಲ್ಲೆಯಲ್ಲಿ ಹಲವು ಮಂದಿ ಸಾಧಕರು ಜನಿಸಿದ್ದಾರೆ. ಅವರಿಂದ ನಾವು ಪ್ರೇರಣೆ ಹೊಂದಬೇಕು. ಸಾಧನೆ ಮಾಡಲು ಪ್ರತಿಯೊಬ್ಬರೂ ಪಣ ತೊಡೋಣ ಎಂದು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯಿರುವ ಯೂನಿವರ್ಸಲ್ ಪಬ್ಲಿಕ್ ಸ್ಕೂಲ್ನಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್, ಎಚ್.ನರಸಿಂಹಯ್ಯ, ನಾರಾಯಣಮೂರ್ತಿ ಮುಂತಾದ ದಿಗ್ಗಜರು ಜನಿಸಿದ ಮಣ್ಣಿದು. ಇಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ಸಾಧಿಸಿ ತೋರಿಸಿದ್ದಾರೆ. ಸಾಧಕರ ಸಾಧನೆಗಳನ್ನು ಅವರ ಕುರಿತ ಪುಸ್ತಕಗಳನ್ನು ಓದುವ ಮೂಲಕ ತಿಳಿಯಬೇಕು. ಅವರಿಂದ ಪ್ರೇರಣೆ ಪಡೆಯುವ ಮೂಲಕ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.
ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ಅವರು ಈ ಸಂದರ್ಭದಲ್ಲಿ ವಿವರಿಸಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಜಾನಕಿ, ಎಸ್.ಎನ್. ಗೀತಾ ಮತ್ತು ಎ.ವರ್ಷಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಎ.ಪಿ.ಜೆ ಅಬ್ದುಲ್ ಕಲಾಂ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಮುಖ್ಯ ಶಿಕ್ಷಕ ಶಾಂತರಾಜು, ಶಿಕ್ಷಕರಾದ ಮಧುಸೂದನ್, ಮೂರ್ತಿ, ಕಲ್ಯಾಣಿ, ಸುಮಿತ್ರಾ, ವಾಣಿ, ಶೋಭಾ ಹಾಜರಿದ್ದರು.
- Advertisement -
- Advertisement -
- Advertisement -
- Advertisement -