ಮೇಲೂರು ಗ್ರಾಮವನ್ನು ವಿವಿಧ ಸಾಹಿತಿ, ಕಲಾವಿದರ ಭಾವಚಿತ್ರಗಳಿಂದ ಸಿಂಗರಿಸಲಾಗಿತ್ತು. ನಾಡಬಾವುಟದ ರಂಗು ಗ್ರಾಮವನ್ನು ಆವರಿಸಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಶಾಲಾ ವಿದ್ಯಾರ್ಥಿಗಳು ನಾಡ ಬಾವುಟವನ್ನು ಕೈಲಿ ಹಿಡಿದು ತಮ್ಮ ನಾಡಪ್ರೀತಿಯನ್ನು ತೋರುತ್ತಿದ್ದರೆ, ಹಿರಿಯರು ಅರಿಶಿನ ಕುಂಕುಮ ಬಣ್ಣದ ಶಲ್ಯವನ್ನು ಹೊದ್ದು ರಾಜ್ಯೋತ್ಸವದ ಆಚರಣೆಯ ಸಮಭ್ರಮದಲ್ಲಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತು ಕನ್ನಡ ರೈತ ಯುವಕರ ಸಂಘದ ವತಿಯಿಂದ ಮಂಗಳವಾರ 59ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕನ್ನಡ ರಣಧೀರ ಪಡೆಯ ಅಧ್ಯಕ್ಷ ಆರ್.ಎಸ್.ಎನ್.ಗೌಡ ಮೇಲೂರು ಗ್ರಾಮದ ಕೆ.ಚಂಗಲರಾಯರೆಡ್ಡಿ ವೃತ್ತದಲ್ಲಿ ನಾಡಧ್ವಜಾರೋಹಣವನ್ನು ನೆರವೇರಿಸಿದರು.
ಧರ್ಮಪ್ರಕಾಶ್ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ,‘ಜನರು ಕುಂಭಕರ್ಣರಾದರೆ ರಾಜ್ಯವು ರಾವಣರಾಜ್ಯವಾಗುತ್ತದೆ. ಜನರು ನಮ್ಮ ಭೂಮಿ ಕಬಳಿಸುವವರ ವಿರುದ್ಧ ದನಿಎತ್ತಬೇಕು. ಕನ್ನಡ ಉಳಿಸುವುದೆಂದರೆ ನಮ್ಮ ನೆಲಕ್ಕಾಗುವ ಅನ್ಯಾಯವನ್ನು ಖಂಡಿಸುವುದು, ನಮ್ಮ ಜನರಿಗಾಗುವ ತೊಂದರೆಯನ್ನು ಪ್ರತಿಭಟಿಸುವುದು, ಭ್ರಷ್ಟಾಚಾರ ತೊಲಗಿಸುವುದು, ರಾಜ್ಯವನ್ನು ರಾಮರಾಜ್ಯವನ್ನಾಗಿಸುವುದಾಗಿದೆ. ಜನಪ್ತಿನಿಧಿಗಳು ಅನ್ಯಾಯ ಮಾಡಿದರೆ ಪ್ರತಿಭಟಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಕನ್ನಡ ಭಾಷೆಗೆ ಅತ್ಯಂತ ಶ್ರೀಮಂತ ಇತಿಹಾಸವಿದ್ದು, ಅದನ್ನು ಇನ್ನಷ್ಟು ಉನ್ನತಕ್ಕೆ ತರಬೇಕಾಗಿದೆ. ಭಾರತ ದೇಶ ಸಮಾನತೆ ಮತ್ತು ಜಾತ್ಯತೀತ ರಾಷ್ಟ್ರವಾಗಿದ್ದು, ಇದರ ಕೀರ್ತಿ ಪತಾಕೆಯನ್ನು ನಮ್ಮ ಮಾತೃಭಾಷೆಯಿಂದ ಎತ್ತಿಹಿಡಿಯಬೇಕು. ನಮ್ಮ ನಡೆ, ನುಡಿ ಎಲ್ಲವೂ ಕನ್ನಡವಾಗಲಿ ಎಂದು ನುಡಿದರು.
ರಾಮಕೃಷ್ಣ ಮಠದ ಮಂಗಳಾನಾಥಾನಂದ ಸ್ವಾಮೀಜಿ ಭಕ್ತಿಗೀತೆಗಳನ್ನು ಹಾಡಿ ಕನ್ನಡ ನಾಡು ನುಡಿಯ ಕುರಿತಂತೆ ಆಶೀರ್ವಚನ ನೀಡಿದರು. ಕನ್ನಡ ರಣಧೀರ ಪಡೆಯ ಅಧ್ಯಕ್ಷ ಆರ್.ಎಸ್.ಎನ್.ಗೌಡ, ಸಾಹಿತಿ ಚಟ್ನಳ್ಳಿ ಮಹೇಶ್, ಕೆನರಾ ಬ್ಯಾಂಕ್ ಗ್ರಾಮಾಂತರ ವೃತ್ತದ ಉಪಮಹಾಪ್ರಬಂಧಕ ಎಂ.ಎಂ.ಚಿನಿವಾರ್, ಕನ್ನಡ ಪ್ರಾಧ್ಯಾಪಕ ಎಚ್.ಜಿ.ಶ್ರೀನಿವಾಸ ಪ್ರಸಾದ್ ಮಾತನಾಡಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಕುರಿತ ಗೀತೆಗಳಿಗೆ ನೃತ್ಯವನ್ನು ಹಾಗೂ ಕಿತ್ತೂರು ಚನ್ನಮ್ಮ ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮೇಲೂರಿನ ಹಿರಿಯ ಶ್ರಮ ಜೀವಿ ಚಾಂದ್ಪಾಷ, ಕನ್ನಡದ ಕಟ್ಟಾಳು ಹಾಗೂ ಪ್ರಕಾಶಕ ವೆಂಕಟೇಶಮೂರ್ತಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಮೇಲೂರು ಸುಧೀರ್, ಸುದರ್ಶನ್, ಧರ್ಮೇಂದ್ರ, ಆರ್.ಎ.ಉಮೇಶ್, ಕೆ.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಶ್ರೀನಿವಾಸ್, ಗೋಪಾಲ್, ಆನಂದ್, ಶ್ರೀಧರ್, ಕೆ.ಎಸ್.ಮಂಜುನಾಥ್, ಎಂ.ಮುನಿಕೃಷ್ಣ, ಎಂ.ಜೆ.ಶ್ರೀನಿವಾಸ್, ಶ್ರೀನಿವಾಸ್(ಪುಲಿ) ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.