ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಹುತೇಕ ಪಂಚಾಯತಿಗಳು ಕಾಂಗ್ರೆಸ್ ಪಕ್ಷದ ಪಾಲಾಗಿರುವುದು ಜನರು ಪಕ್ಷಕ್ಕೆ ಕೊಟ್ಟಿರುವ ನೈತಿಕ ಸ್ಥೈರ್ಯವಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಪಂಚಾಯತಿ ಕಚೇರಿಯಲ್ಲಿ ಬುಧವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿ ಸೇರಿಕೊಂಡಂತೆ ಒಟ್ಟು 34 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ ಎರಡರಲ್ಲಿ ಚುನಾವಣೆ ನಡೆದಿಲ್ಲ. ಈ ಬಾರಿ ಚುನಾವಣೆ ನಡೆದವುಗಳಲ್ಲಿ 22 ಪಂಚಾಯತಿಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಗ್ರಾಮ ಮಟ್ಟದ ಜನರ ಆಶೋತ್ತರಗಳು ನಾಡಿನ ರಾಜಕೀಯ ದಿಕ್ಸೂಚಿಯಿದ್ದಂತೆ. ಚುನಾಯಿತರಾದವರು ಗ್ರಾಮದ ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವಲ್ಲಿ ಪರಿಶ್ರಮ ವಹಿಸಬೇಕು ಎಂದು ತಿಳಿಸಿದರು.
ಹಂಡಿಗನಾಳ ಪಂಚಾಯತಿಯಲ್ಲಿ ಎಂಟು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಚುನಾವಣೆ ನಡೆಸುವ ಅಗತ್ಯವುಂಟಾಗಲಿಲ್ಲ. ಇದು ಜನರ ಒಗ್ಗಟ್ಟನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.
ಹಂಡಿಗನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕೇಶವಾಪುರ ಮುನಿಯಪ್ಪ, ಉಪಾಧ್ಯಕ್ಷರಾಗಿ ಹಂಡಿಗನಾಳ ಶಾರದಮ್ಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಜಿಲ್ಲಾಪಂಚಾಯತಿ ಎ.ಇ.ಇ ಶಿವಾನಂದ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಜಯರಾಂ, ರಾಜು, ಪ್ರೇಮಮ್ಮ, ಆಶಾ, ಸುಮಿತ್ರಮ್ಮ, ತ್ಯಾಗರಾಜ್, ಮಹದೇವಯ್ಯ, ಕಾರ್ಯದರ್ಶಿ ಗೌಸ್ಪೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.