ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಪಿಡುಗಿನ ನಿರ್ಮೂಲನೆ ಸಾಧ್ಯ ಎಂದು ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಕಾರ್ಮಿಕ ಇಲಾಖೆ ಮತ್ತು ತಾಲ್ಲೂಕು ವಕೀಲರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯ’ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ದಿನಾಚರಣೆ ಆಚರಿಸಿ ಜಾಗೃತಿ ಮೂಡಿಸಿದರಷ್ಟೇ ಈ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರ ಬದಲು ಮಕ್ಕಳು ದೇಶದ ಆಸ್ತಿ ಅವರ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಬೇಕೆಂಬ ಮನಸ್ಥಿತಿ ಎಲ್ಲರಲ್ಲಿ ಬರಬೇಕಿದೆ. ಭಾರತದ ಸಂವಿಧಾನ ಸಹ 6 ರಿಂದ 14ನೇ ವಯಸ್ಸಿನವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ನಿಬಂಧನೆ ವಿಧಿಸಿದೆ. ಅದರಂತೆ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮತ್ತಿತರ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದೆ. ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಹಲವಿಧ ಸೌಲಭ್ಯ ಒದಗಿಸುವುದರ ಜತೆಗೆ ನೂರಾರು ಕಾನೂನುಗಳನ್ನು ಮಾಡಬಹುದು. ಆದರೆ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಹೊಣೆಯಿಂದ ಪಾಲಕರು ತಪ್ಪಿಸಿಕೊಂಡರೆ ಸರ್ಕಾರದ ಆಶಯ ಈಡೇರಲಾರದು ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ನಿರೀಕ್ಷಕ ಎಸ್.ವಿಶ್ವನಾಥ, ‘ಸಾಮಾಜಿಕ ಭದ್ರತಾ ಯೋಜನೆಯಡಿ ಬಾಲಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು’ ಎಂಬ ವಿಷಯವಾಗಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ವಕೀಲರಾದ ನಾಗೇಂದ್ರಬಾಬು, ಮುನಿರಾಜು, ಸ್ವಯಂಸೇವಕಿ ಸೌಮ್ಯ ಮತ್ತಿತರರು ಈ ಸಂದರ್ಭಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -