ಆರೋಗ್ಯ ಸಂಬಂಧಿ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಬೆಂಗಳೂರು ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಸಿದ್ದರಾಜು ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಛಲವಾದಿ ಸಂಘಟನೆ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸಂಘಟನೆಗಳೂ ಸಮಾಜದಿಂದಲೇ ಬಂದಿರುವುದರಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯವೂ ಅವರದ್ದಾಗಿರುತ್ತದೆ. ಈ ರೀತಿಯ ರಕ್ತದಾನ ಶಿಬಿರಗಳು ಎಲ್ಲರಿಗೂ ಮಾದರಿಯಾದ್ದು, ಸಾಮರಸ್ಯ, ಮಾನವೀಯತೆಗೆ ಇದು ಕಾರಣವಾಗುತ್ತದೆ. ರಕ್ತಕ್ಕೆ ಜಾತಿ ಬೇಧವಿಲ್ಲ. ಆರೋಗ್ಯವಂತ ಯುವಕರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಪರೋಪಕಾರಿಗಳಾಗಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ 40 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಛಲವಾದಿ ಸಂಘದ ಜಿಲ್ಲಾ ಅಧ್ಯಕ್ಷ ತ್ಯಾಗರಾಜು, ಡಾ.ವೆಂಕಟೇಶಮೂರ್ತಿ, ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಟಿ.ಟಿ.ನರಸಿಂಹಪ್ಪ, ಕೃಷ್ಣಪ್ಪ, ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಶ್ರೀರಾಮ್, ರಾಜಶೇಖರ್, ಡಾ.ಸುಧಾಕರ್, ಸಮೀವುಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.