Home News ಚುನಾವಣೆ ಬಹಿಷ್ಕಾರಕ್ಕೆ ಬಯಲು ಸೀಮೆಯ ಜನರೆಲ್ಲರೂ ಬೆಂಬಲ ನೀಡಿಲ್ಲ

ಚುನಾವಣೆ ಬಹಿಷ್ಕಾರಕ್ಕೆ ಬಯಲು ಸೀಮೆಯ ಜನರೆಲ್ಲರೂ ಬೆಂಬಲ ನೀಡಿಲ್ಲ

0

ಶಾಶ್ವತ ನೀರಿಗಾಗಿ ಒತ್ತಾಯಿಸಿ ತಾಲ್ಲೂಕಿನ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗಳು ಚುನಾವಣೆಯನ್ನು ಬಹಿಷ್ಕರಿಸಿರುವುದು ಕೇವಲ ಆಂತರಿಕ ತೀರ್ಮಾನವಷ್ಟೆ. ಅದು ಬಯಲು ಸೀಮೆ ಜನರ ಸಾಮೂಹಿಕ ನಿರ್ಣಯವಲ್ಲ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರಕ್ಕಾಗಿ ಗಂಜಿಗುಂಟೆ, ದಿಬ್ಬೂರಹಳ್ಳಿ ಭಾಗಗಳ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಯಲು ಸೀಮೆ ಪ್ರದೇಶದಲ್ಲಿ ಸುಮಾರು 74 ತಾಲ್ಲೂಕುಗಳಿದ್ದು, ಚುನಾವಣೆ ಬಹಿಷ್ಕಾರಕ್ಕೆ ಎಲ್ಲರೂ ಬೆಂಬಲ ನೀಡಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಎತ್ತಿನಹೊಳೆ ಯೋಜನೆಗೆ 500 ಕೋಟಿ ರೂಗಳನ್ನು ಖರ್ಚು ಮಾಡಿದ್ದು, 5000 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಗ್ರಾಮಗಳಲ್ಲಿ ಮನವರಿಕೆ ಮಾಡಿಕೊಡುತ್ತಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತಯಾಚಿಸಲಿದ್ದೇವೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಚಿಕ್ಕಮುನಿಯಪ್ಪ, ವೆಂಕಟೇಶ್, ತನ್ವೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.