೫೦೦ ಮತ್ತು ೧೦೦೦ ರೂಪಾಯಿಗಳ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಚಿಲ್ಲರೆಗಾಗಿ ಸಾರ್ವಜನಿಕರು ಪರದಾಡುತ್ತಿರುವ ನಾಗರಿಕರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.
ಬ್ಯಾಂಕುಗಳಲ್ಲಿ ಖಾತೆಗಳಿಗೆ ಹಣ ಜಮಾ ಮಾಡುವ ಗ್ರಾಹಕರಿಗಿಂತ ಖಾತೆಗಳಲ್ಲಿನ ಹಣವನ್ನು ಹಿಂಪಡೆಯಲು ಸಾಲಿನಲ್ಲಿ ನಿಂತಿದ್ದ ಗ್ರಾಹಕರೇ ಗುರುವಾರ ಬ್ಯಾಂಕುಗಳ ಮುಂದೆ ಹೆಚ್ಚಾಗಿದ್ದರು. ನೋಟುಗಳ ಬದಲಾವಣೆಗಾಗಿ ಬಂದಿದ್ದ ಗ್ರಾಹಕರ ಬೆರಳಿಗೆ ಶಾಯಿಯನ್ನು ಹಾಕುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು.
ಬ್ಯಾಂಕುಗಳಲ್ಲಿ ೨ ಸಾವಿರ ಮುಖಬೆಲೆಯ ನೋಟುಗಳನ್ನೆ ಗ್ರಾಹಕರಿಗೆ ವಿತರಣೆ ಮಾಡುತ್ತಿರುವುದರಿಂದ ದಿನಸಿ ಅಂಗಡಿಗಳ ವ್ಯಾಪಾರಿಗಳು, ಮೆಡಿಕಲ್ ಸ್ಟೋರ್‌ಗಳು, ಬೀದಿಬದಿ ವ್ಯಾಪಾರಿಗಳು ಚಿಲ್ಲರೆ ಸಮಸ್ಯೆಯಿಂದ ವ್ಯಾಪಾರಗಳಿಲ್ಲದೆ ಪರದಾಡುವಂತಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಹಳೇಯ ನೋಟುಗಳನ್ನು ಸ್ವೀಕಾರ ಮಾಡಿಕೊಳ್ಳದ ಪರಿಣಾಮವಾಗಿ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ಪರದಾಡುವಂತಾಗಿತ್ತು. ಪೆಟ್ರೋಲ್ ಬಂಕ್‌ಗಳಲ್ಲಿಯೂ ಹಳೇಯ ನೋಟುಗಳನ್ನು ಸ್ವೀಕಾರ ಮಾಡಲು ಹಿಂಜರಿಯುತ್ತಿದ್ದಾರೆ. ೫೦೦ ಕೊಟ್ಟರೆ ಪೂರ್ತಿ ಹಣಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳುವಂತೆ ಗ್ರಾಹಕರನ್ನು ಒತ್ತಾಯ ಮಾಡಲಾಗುತ್ತಿದೆ. ಗ್ರಾಹಕರು ನಿರಾಕರಿಸಿದರೆ ಚಿಲ್ಲರೆ ನೀಡಲು ಟೋಕನ್‌ಗಳನ್ನು ನೀಡಿ ಸಮಯ ನಿಗದಿ ಮಾಡುತ್ತಿದ್ದಾರೆ.
ಯಾವುದೇ ಬ್ಯಾಂಕುಗಳ ಎ.ಟಿ.ಎಂ.ಗಳ ಬಾಗಿಲುಗಳು ತೆರೆಯದೇ ಗ್ರಾಹಕರು ವುಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಕನಕಜಯಂತಿಯ ರಜಾ ದಿನವಾದ್ದರಿಂದ ಶಾಲಾ ಮಕ್ಕಳೂ ಕೂಡಾ ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಂತಿದ್ದರು. ಪೋಷಕರು ತಮ್ಮ ಹೆಸರುಗಳಲ್ಲಿ ಖಾತೆಗಳು ಇಲ್ಲದ ಕಾರಣ ವಿದ್ಯಾರ್ಥಿ ವೇತನಕ್ಕಾಗಿ ಮಾಡಿಸಿರುವ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಬ್ಯಾಂಕುಗಳಿಗೆ ಬರುವಂತಹ ಹಿರಿಯ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಆರ್.ಬಿ.ಐ ಘೋಷಣೆ ಮಾಡಲಾಗಿದ್ದರೂ ಕೂಡಾ ಹಿರಿಯ ನಾಗರಿಕರಿಗೆ ಯಾವುದೇ ಸೌಲಭ್ಯಗಳನ್ನು ಮಾಡಿಕೊಡದ ಕಾರಣ ಗಂಟೆಗಟ್ಟಲೇ ಸಾಲಿನಲ್ಲಿ ನಿಂತುಕೊಂಡು ಹಣಕ್ಕಾಗಿ ಕಾಯಬೇಕಾಯಿತು.
ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೊರತು ಪಡಿಸಿ ಸಹಕಾರಿ ಬ್ಯಾಂಕುಗಳಲ್ಲಿ ಚಿಲ್ಲರೆ ನೀಡುವ ವ್ಯವಸ್ಥೆಯಿಲ್ಲದ ಕಾರಣ, ಡಿ.ಸಿ.ಸಿ.ಬ್ಯಾಂಕ್, ಪಿ.ಎಲ್.ಡಿ.ಬ್ಯಾಂಕ್ ಮುಂತಾದ ಕಡೆಗಳಲ್ಲಿ ಖಾತೆಗಳನ್ನು ಹೊಂದಿರುವ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಚಿಲ್ಲರೆಗಾಗಿ ಪರದಾಡುವಂತಾಗಿತ್ತು.