Home News ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದೆ ಗೆದ್ದಲು ಪಾಲಾಗುತ್ತಿರುವ ಪುಸ್ತಕಗಳು

ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದೆ ಗೆದ್ದಲು ಪಾಲಾಗುತ್ತಿರುವ ಪುಸ್ತಕಗಳು

0

ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಸಾವಿರಾರು ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗೆದ್ದಲು ಹಿಡಿಯುತ್ತಿವೆ.
ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಿಗೆ ವಿತರಿಸಲೆಂದು ಸುಮಾರು 45 ಸಾವಿರ ಪುಸ್ತಕಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದು ಹತ್ತು ತಿಂಗಳುಗಳಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದ ಕಾರಣ ಪುಸ್ತಕಗಳು ಗೆದ್ದಲುಹುಳುಗಳ ಪಾಲಾಗುತ್ತಿವೆ. ಗ್ರಂಥಾಲಯದ ಮೂಲೆಯಲ್ಲಿ ರಾಶಿರಾಶಿಯಾಗಿ ಸುರಿಯಲಾಗಿರುವ ಪುಸ್ತಕಗಳು, ಸೂಕ್ತ ನಿರ್ವಹಣೆಯಿಲ್ಲದೆ ಕೊಳೆಯುತ್ತಿವೆ.
‘ನಾನು ಬಂದು ಕೇವಲ ಐದು ತಿಂಗಳಾಗಿವೆ. ಅದಕ್ಕೂ ಐದು ತಿಂಗಳ ಮೊದಲೇ ಪುಸ್ತಕಗಳು ಬಂದಿವೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಪಾಲಕರಿಗೆ ಪುಸ್ತಕ ತೆಗೆದುಕೊಂಡು ಹೋಗಬೇಕೆಂದು ತಿಳಿಸಿದ್ದರೂ ಯಾರೂ ಬಂದಿಲ್ಲ. ಕೇವಲ ಮಳಮಾಚನಹಳ್ಳಿ, ಪಲಿಚೇರ್ಲು ಮತ್ತು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಪಾಲಕರು ಮಾತ್ರ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಸ್ಥಳಾವಕಾಶವಿಲ್ಲ. ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಮತ್ತು ಪುಸ್ತಕ ವಿತರಣಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕಿ ಶಶಿಕಲಾ.
‘ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸೂಕ್ತ ನಿರ್ವಹಣೆಯಿಲ್ಲದೆ ಜನರನ್ನು ತಲುಪಬೇಕಾದ ಪುಸ್ತಕಗಳು ಗೆದ್ದಲ ಪಾಲಾಗುತ್ತಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಪುಸ್ತಕಗಳು ನೀಡುತ್ತಿದ್ದರೂ ಸಹ, ಗ್ರಾಮ ಪಂಚಾಯತಿಯ ಗ್ರಂಥಪಾಲಕರ ಬೇಜವಾಬ್ದಾರಿತನದಿಂದ ಇದನ್ನು ಸದುಪಯೋಗ ಪಡಿಸಿಕೊಳ್ಳದೆ ಪುಸ್ತಕಗಳು ಹಾಳಾಗುತ್ತಿವೆ. ಇದು ಪಂಚಾಯತಿಗಳ ಗ್ರಂಥಾಲಯಗಳ ಕಾರ್ಯ ವೈಖರಿಯನ್ನು ತೋರಿಸಿಕೊಡುತ್ತದೆ’ ಎಂದು ಡಿ.ವೈ.ಎಫ್‌.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ ದೂರಿದರು.