ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ಹಾಗೂ ಎ.ಪಿ.ಡಿ ಸಂಸ್ಥೆಯ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಗ್ರಾಮೀಣ ಪ್ರದೇಶದ ಅಂಗವಿಕಲ ಯುವಕ ಯುವತಿಯರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆಯ ಮೂಲಕ 16 ರಿಂದ 30 ವರ್ಷದ ಅಂಗವಿಕಲರಿಗೆ ಇರುವ ಸೌಲಭ್ಯಗಳು, ತರಬೇತಿಗಳು ಮತ್ತು ಉದ್ಯೋಗ ಅವಕಾಶಗಳ ಕುರಿತು ಮಾಹಿತಿಯನ್ನು ತಿಳಿಸಲಾಯಿತು. ಉದ್ಯೋಗಾಕಾಂಕ್ಷಿಗಳಾದ ಅಂಗವಿಕಲರಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವಿವಿಧ ಕೌಶಲ್ಯಗಳನ್ನು ಪಡೆಯುವ ಬಗ್ಗೆಯೂ ವಿವರಿಸಲಾಯಿತು.
ಕೈಗಾರಿಕಾ ತರಬೇತಿ, ಮಾಹಿತಿ ತಂತ್ರಜ್ಞಾನ ತರಬೇತಿ, ಕಚೇರಿ ನಿರ್ವಹಣೆ ತರಬೇತಿ, ಟೈಲರಿಂಗ್ ಮತ್ತು ಎಂಬ್ರಾಯಿಡರಿ ತರಬೇತಿ, ತೋಟಗಾರಿಕಾ ತರಬೇತಿ, ದೈಹಿಕ ವ್ಯಾಯಾಮ ತರಬೇತಿ ಮುಂತಾದವುಗಳನ್ನು ಪಡೆದುಕೊಳ್ಳುವುದಲ್ಲದೆ ಉದ್ಯೋಗವಕಾಶಗಳು ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆಯೂ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಪಿ.ಡಿ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ವಿಭಾಗದ ಅಧಿಕಾರಿ ಮುನಿರೆಡ್ಡಿ, ‘ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಆದರೆ ಅವುಗಳನ್ನು ಹೊಂದಲು ಪೂರ್ವ ತಯಾರಿಯ ಅವಶ್ಯಕತೆ ಇರುತ್ತದೆ. ಉದ್ಯೋಗವನ್ನು ಪಡೆಯುವಲ್ಲಿ ಆಂಗ್ಲಭಾಷೆ ಹಾಗೂ ಕಂಪ್ಯೂಟರ್ ಜ್ಞಾನವು ಮುಖ್ಯವಾಗಿದೆ. ಕೌಶಲ್ಯಗಳನ್ನು ತರಬೇತಿಗಳ ಮೂಲಕ ಗಳಿಸಿಕೊಂಡು ಕೈಗಾರಿಕೆಗಳು, ಕಾಲ್ ಸೆಂಟರ್, ಗಾರ್ಮೆಂಟ್, ಮಾರ್ಕೆಟಿಂಗ್ ಮುಂತಾದ ಕಡೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಅಂಗವೈಕಲ್ಯತೆಯು ಮನಸ್ಸನ್ನು ಕಾಡದಂತೆ ಆತ್ಮಸ್ಥೈರ್ಯದಿಂದ ಮಾದರಿ ಬದುಕನ್ನು ನಡೆಸಿ‘ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶಿವಕುಮಾರ್, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಕಾರ್ಯದರ್ಶಿ ಗೋಪಿ, ಅಂಗನವಾಡಿ ಕಾರ್ಯಕರ್ತೆ ಎಸ್.ಭವ್ಯ, ಕನಕರತ್ನ, ದೇವರಾಜ್, ಎ.ಪಿ.ಡಿ ಸಂಸ್ಥೆಯ ಸವಿತಾ, ಕಮಲಾ, ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.