Home News ಗ್ರಾಮಾಂತರ ಪ್ರದೇಶಗಳಲ್ಲಿನ ಆರೋಗ್ಯ ಸಮಸ್ಯೆ ತಡೆಯಲು ಶಿಬಿರಗಳು ನೆರವಾಗಿವೆ

ಗ್ರಾಮಾಂತರ ಪ್ರದೇಶಗಳಲ್ಲಿನ ಆರೋಗ್ಯ ಸಮಸ್ಯೆ ತಡೆಯಲು ಶಿಬಿರಗಳು ನೆರವಾಗಿವೆ

0

ಗ್ರಾಮಾಂತರ ಪ್ರದೇಶಗಳಲ್ಲಿನ ಬಹಳಷ್ಟು ಜನರು ಥೈರಾಯಿಡ್, ಮೂಳೆ ಸವೆತದಂತಹ ಕಾಯಿಲೆಗಳಿಗೆ ಒಳಗಾಗುತ್ತಿರುವುದರಿಂದ ಅವರ ಆರೋಗ್ಯ ರಕ್ಷಣೆ ಮಾಡಲು ಮುಂದಾಗುವುದು ಅನಿವಾರ್ಯವಾಗಿದೆ ಎಂದು ಎಂ.ವಿ.ಜೆ. ಆಸ್ಪತ್ರೆಯ ವೈದ್ಯ ಡಾ. ಪ್ರಮೋದ್ ಹೇಳಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಮಂಗಳವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಿರಂತರವಾದ ದುಡಿಮೆಯಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಹಳ್ಳಿಗಾಡಿನ ಜನರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ರೀತಿಯ ಉಚಿತ ಆರೋಗ್ಯ ಶಿಬಿರಗಳು ಈ ಭಾಗದ ಗ್ರಾಮೀಣರಿಗೆ ಅತ್ಯಗತ್ಯವಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿರುವ ಬಯಲು ಸೀಮೆ ಭಾಗವಾದ ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಜನರು ಪ್ಲೋರೈಡ್ ನೀರನ್ನು ಕುಡಿಯುವ ಮೂಲಕ ಅನಾರೋಗ್ಯಗಳಿಗೆ ಒಳಗಾಗುತ್ತಿದ್ದಾರೆ. ಮೂಳೆ ಸವೆತ ಕಂಡು ಬರುತ್ತಿದೆ. ಕಣ್ಣಿನ ದೃಷ್ಠಿ ಮಂಜಾಗುತ್ತಿದ್ದು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಜನರ ಆರೋಗ್ಯ ರಕ್ಷಣೆಗಾಗಿ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ತಾಲ್ಲೂಕಿನಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದ್ದು ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಶಿಬಿರಗಳ ಉಪಯೋಗ ಪಡೆದುಕೊಂಡಿದ್ದಾರೆ ಎಂದರು.
ಶಿಬಿರದಲ್ಲಿ ಮೂಳೆ ತಜ್ಞರು, ಕಣ್ಣಿನ ತಜ್ಞರು, ಸ್ತ್ರೀ ರೋಗ ತಜ್ಞರು, ದಂತ ವೈದ್ಯರು, ನರರೋಗ ತಜ್ಞರು, ಮಕ್ಕಳ ತಜ್ಞರು, ನಾಗರಿಕರಿಗೆ ಪರೀಕ್ಷೆ ನಡೆಸಿದರು. ಶಸ್ತ್ರ ಚಿಕಿತ್ಸೆ ಅಗತ್ಯವಾಗಿರುವ ರೋಗಿಗಳಿಗೆ ತಗಲುವ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ ಎಂದರು.
ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದ ನಾಗರಿಕರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಮತ್ತು ಗಿಡಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ನಾಗರಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷರಾದ ಶಿವಪ್ಪ, ರಾಮಕೃಷ್ಣಪ್ಪ, ಸದಸ್ಯ ಎಸ್.ಆರ್.ನಾರಾಯಣಸ್ವಾಮಿ, ಆನೂರು ದೇವರಾಜ್‌, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ, ಬುರುಡುಗುಂಟೆ ಅನ್ವರ್ ಸಾಬ್, ತಲಕಾಯಲಬೆಟ್ಟ ಅಶ್ವಥ್ಥನಾರಾಯಣ, ಗಂಗಣ್ಣ, ದಢಂಘಟ್ಟ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.